ಮಣಿಪುರ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯ ಅಭ್ಯರ್ಥಿಯಾಗಿ ಎನ್.ಬಿರೇನ್ ಸಿಂಗ್ ಆಯ್ಕೆ

ಇಂಫಾಲ,ಮಾ.13: ಮಣಿಪುರದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ನೊಂಗ್ದೊಮ್‌ಬಾಮ್ ಬಿರೇನ್ ಸಿಂಗ್ ಅವರು ಸೋಮವಾರ ಸಂಜೆ ಆಯ್ಕೆಯಾಗುವ ಮೂಲಕ ಎರಡು ದಿನಗಳ ಊಹಾಪೋಹಗಳು ಮತ್ತು ಸರಣಿ ರಹಸ್ಯ ಸಭೆಗಳಿಗೆ ಕೊನೆಗೂ ತೆರೆ ಬಿದ್ದಿದೆ.
ಒಕ್ರಂ ಇಬೋಬಿಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ ಸಿಂಗ್(56) ಬಿಜೆಪಿಯು ರಾಜ್ಯದಲ್ಲಿ ಮುಂದಿನ ಸರಕಾರವನ್ನು ರಚಿಸುವಲ್ಲಿ ಯಶಸ್ವಿಯಾದರೆ ಮಣಿಪುರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಲಿದ್ದಾರೆ.
ವ್ಯಾಪಕ ಸಮಾಲೋಚನೆಗಳು ಮತ್ತು ಚರ್ಚೆಗಳ ಬಳಿಕ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಎನ್.ಬಿರೇನ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಗೋಯಲ್, ಇತರ ಇಬ್ಬರು ಹಿರಿಯ ನಾಯಕರಾದ ಪ್ರಕಾಶ ಜಾವಡೇಕರ್ ಮತ್ತು ವಿನಯ ಸಹಸ್ರಬುದ್ಧೆ ಅವರ ಉಪಸ್ಥಿತಿಯಲ್ಲಿ ನಾಲ್ಕು ಗಂಟೆಗಳ ಕಾಲ ನಡೆದ ಬಿಜೆಪಿಯ 21 ನೂತನ ಶಾಸಕರ ಸಭೆಯ ಬಳಿಕ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ.
‘‘ಇದು ನನ್ನ ಪಾಲಿಗೆ ದೊಡ್ಡ ಸವಾಲು ಆಗಿದೆ. ದುರಾಡಳಿತದ ಕಾರಣಕ್ಕೆ ನಾನು ಕಾಂಗ್ರೆಸ್ ತೊರೆದಿದ್ದೆ. ಬದಲಾವಣೆಗಾಗಿ ಮತಗಳನ್ನು ನೀಡಿರುವ ಮಣಿಪುರದ ಜನತೆಗೆ ಬಿಜೆಪಿಯು ಒಳ್ಳೆಯ ಆಡಳಿತವನ್ನು ನಿಡಬೇಕಾಗಿದೆ ಎಂದು ಆಯ್ಕೆಯ ಬಳಿಕ ಸಿಂಗ್ ಹೇಳಿದರು.
ನಂತರ ಸಿಂಗ್ ಮತ್ತು ಇತರ ಬಿಜೆಪಿ ಶಾಸಕರು ರಾಜಭವನದಲ್ಲಿ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಅವರನ್ನು ಭೇಟಿಯಾಗಿ ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ಬೆಂಬಲಿಸುವ ಶಾಸಕರ ಪಟ್ಟಿಯನ್ನು ಸಲ್ಲಿಸಿ ಸರಕಾರ ರಚನೆಯ ಹಕ್ಕು ಮಂಡಿಸಿದರು.
ಎನ್‌ಪಿಪಿಯ ನಾಲ್ವರು, ಎನ್‌ಪಿಎಫ್‌ನ ನಾಲ್ವರು, ಎಲ್‌ಜೆಪಿಯ ಓರ್ವ ಮತ್ತು ಇತರ ಕೆಲವು ಶಾಸಕರ ಬೆಂಬಲವನ್ನು ನಾವು ಹೊಂದಿದ್ದೇವೆ. ವಿಧಾನಸಭೆಯಲ್ಲಿ ನಾವು ಸ್ಪಷ್ಟ ಬಹುಮತ ಹೊಂದಿದ್ದೇವೆ ಮತ್ತು ಎನ್.ಬಿರೇನ್‌ಸಿಂಗ್ ಅವರು ಮಣಿಪುರದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಗೋಯಲ್ ಹೇಳಿದರು.
ಬಿಜೆಪಿ ಮತ್ತು ಮಿತ್ರಪಕ್ಷಗಳು ರವಿವಾರ ರಾತ್ರಿ ರಾಜ್ಯಪಾಲರನ್ನು ಭೇಟಿಯಾಗಿ 32 ಶಾಸಕರ ಪಟ್ಟಿಯನ್ನು ಸಲ್ಲಿಸಿದ್ದವು. ನಂತರ ಕಾಂಗ್ರೆಸ್ ಕೂಡ ರಾಜ್ಯಪಾಲರನ್ನು ಭೇಟಿಯಾಗಿ 28 ಶಾಸಕರ ಪಟ್ಟಿಯನ್ನು ಸಲ್ಲಿಸಿ ಸರಕಾರ ರಚನೆಯ ಹಕ್ಕು ಮಂಡಿಸಿತ್ತು.
60 ಸದಸ್ಯಬಲದ ಮಣಿಪುರ ವಿಧಾನಸಭೆಯಲ್ಲಿ ಸರಕಾರ ರಚನೆಗೆ ಕನಿಷ್ಠ 31 ಶಾಸಕರ ಬೆಂಬಲ ಅಗತ್ಯವಿದೆ.
ಇದೀಗ ಸರಕಾರ ರಚನೆಗೆ ಯಾರಿಗೆ ಆಹ್ವಾನ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ಎಲ್ಲರ ಕಣ್ಣುಗಳು ರಾಜಭವನದ ಮೇಲಿವೆ.







