ಸುಪರ್ ಮಾರ್ಕೆಟ್‌ಗೆ ನುಗ್ಗಿ 3ಲಕ್ಷ ರೂ. ಸುಲಿಗೆ: ಸುಪರ್‌ವೈಸರ್‌ಗೆ ಕತ್ತಿಯಿಂದ ಹಲ್ಲೆ

ಮಣಿಪಾಲ, ಮಾ.13: ಮಣಿಪಾಲದ ಐನಾಕ್ಸ್ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿರುವ ಮೋರ್ ಸೂಪರ್ ಮಾರ್ಕೆಟ್‌ಗೆ ಇಂದು ಬೆಳಗಿನ ಜಾವ 6:40ರ ಸುಮಾರಿಗೆ ನುಗ್ಗಿದ ಅಪರಿಚಿತರಿಬ್ಬರು ಸುಪರ್‌ವೈಸರ್‌ಗೆ ಹಲ್ಲೆ ನಡೆಸಿ ಲಕ್ಷಾಂತರ ರೂ. ನಗದು ಹಾಗೂ ಇತರ ಸೊತ್ತುಗಳನ್ನು ಸುಲಿಗೆ ಮಾಡಿರುವ ಬಗ್ಗೆ ವರದಿಯಾಗಿದೆ.
ಮೋರ್‌ನ ಸುಪರ್‌ವೈಸರ್ ಮಂಜುನಾಥ್ ಪೂಜಾರಿ ಎಂಬವರು ಬೆಳಗ್ಗೆ ಅಂಗಡಿಯ ಶಟರ್ ತೆರೆದು ಒಳಗೆ ಕಂಪ್ಯೂಟರ್ ಆನ್ ಮಾಡುತ್ತಿರುವಾಗ ಬೈಕಿನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ಅಪರಿಚಿತರಿಬ್ಬರು ಅಂಗಡಿಯೊಳಗೆ ನುಗ್ಗಿ ಮಂಜುನಾಥ್ ಪೂಜಾರಿಯವರಲ್ಲಿ ಲಾಕರ್ ಕೀ ಕೊಡುವಂತೆ ಕೇಳಿದರು. ಕೀ ಕೊಡಲು ಒಪ್ಪದ ಮಂಜುನಾಥ್ ಪೂಜಾರಿಗೆ ಅವರಿಬ್ಬರು ತಮ್ಮಲ್ಲಿದ್ದ ಕತ್ತಿಯಿಂದ ಕಿವಿಯ ಭಾಗಕ್ಕೆ ಹಲ್ಲೆ ನಡೆಸಿದರು.
ಬಳಿಕ ಬಲಾತ್ಕಾರವಾಗಿ ಕೀಯನ್ನು ಪಡೆದು ಲಾಕರ್ ತೆರೆದು ಅದರಲ್ಲಿದ್ದ 2,99,500ರೂ. ನಗದು, ಮಂಜುನಾಥ್ ಪೂಜಾರಿಯ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್, 79ಸಾವಿರ ರೂ. ಮೌಲ್ಯದ ಕೂಪನ್‌ಗಳನ್ನು ಕಳವು ಮಾಡಿ ಪರಾರಿಯಾದರು. ಗಾಯಗೊಂಡಿರುವ ಮಂಜುನಾಥ್ ಪೂಜಾರಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





