ಇಥಿಯೋಪಿಯ: ಕಸದ ಗುಡ್ಡ ಕುಸಿದು ಕನಿಷ್ಠ 46 ಸಾವು

ಅಡಿಸ್ ಅಬಾಬ (ಇಥಿಯೋಪಿಯ), ಮಾ. 13: ಇಥಿಯೋಪಿಯದ ರಾಜಧಾನಿ ಅಡಿಸ್ ಅಬಾಬದ ಹೊರವಲಯದಲ್ಲಿರುವ ದೇಶದ ಅತಿ ದೊಡ್ಡ ಕಸದ ಗುಡ್ಡೆ ಶನಿವಾರ ಕುಸಿದು ಕನಿಷ್ಠ 46 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಅತಿದೊಡ್ಡಟ ಕಸದ ಗುಡ್ಡೆಯ ಒಂದು ಭಾಗ ಕುಸಿದಾಗ ಕೋಶೆ ಎಂಬ ಸ್ಥಳದಲ್ಲಿ ವಾಸಿಸುತ್ತಿರುವ ಜನರ ಡಝನ್‌ಗಟ್ಟಳೆ ಮನೆಗಳು ಕುಸಿತದಿಂದ ಧರಾಶಾಯಿಯಾಗಿವೆ ಎಂದು ಎಎಫ್‌ಪಿ ಪತ್ರಕರ್ತರೊಬ್ಬರು ತಿಳಿಸಿದರು.
32 ಮಹಿಳೆಯರು ಮತ್ತು 14 ಪುರುಷರು ಸೇರಿದಂತೆ 46 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಿಟಿ ಕಮ್ಯುನಿಕೇಶನ್ಸ್ ಬ್ಯೂರೊದ ಮುಖ್ಯಸ್ಥೆ ಡಗ್ಮವಿಟ್ ಮೋಗಸ್ ತಿಳಿಸಿದರು. ಮೃತರಲ್ಲಿ ಮಕ್ಕಳೂ ಸೇರಿದ್ದಾರೆ.
ಮೃತರಲ್ಲಿ ಹೆಚ್ಚಿನವರು 74 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕಸದ ಗುಡ್ಡೆಯ ಸಮೀಪ ಜೀವನೋಪಾಯಕ್ಕಾಗಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದವರು ಎಂದು ಅವರು ಹೇಳಿದರು.
ಕುಸಿದ ಕಸದ ರಾಶಿಯಲ್ಲಿ ಹಲವಾರು ಮಂದಿ ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಜನರು ಅದರ ಸಮೀಪಕ್ಕೆ ಹೋಗುವುದನ್ನು ಪೊಲೀಸರು ನಿಯಂತ್ರಿಸಿದ್ದಾರೆ.
ಕೋಶೆ ತ್ಯಾಜ್ಯರಾಶಿಯಲ್ಲಿ 40 ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಸುಮಾರು 40 ಲಕ್ಷ ಜನಸಂಖ್ಯೆಯ ಅಡಿಸ್ ಅಬಾಬ ನಗರದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ.







