ಜೆಎನ್‌ಯು: ಜಾತೀಯತೆಗೆ ನೊಂದು ಇನ್ನೋರ್ವ ದಲಿತ ವಿದ್ಯಾರ್ಥಿ ಆತ್ಮಹತ್ಯೆ

ಹೊಸದಿಲ್ಲಿ, ಮಾ. 13: ಹೈದರಾಬಾದ್ ವಿವಿಯ ಪ್ರತಿಭಾವಂತ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ದೇಶಾದ್ಯಂತ ಹೋರಾಟದ ಕಿಚ್ಚು ಹಚ್ಚಿರುವ ಬೆನ್ನಿಗೇ, ಇದೀಗ ಹೊಸದಿಲ್ಲಿಯ ಜೆಎನ್‌ಯು ವಿವಿ ದಲಿತ ಸಂಶೋಧನಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೈದಿರುವುದು ದೇಶವನ್ನು ದಿಗ್ಭ್ರಾಂತಗೊಳಿಸಿದೆ.
ಮೃತ ವಿದ್ಯಾರ್ಥಿಯನ್ನು ರಜನಿ ಕ್ರಿಶ್ ಎಂದು ಗುರುತಿಸಲಾಗಿದೆ. ಸೀಟು ಹಂಚಿಕೆಯಲ್ಲಿ ದಲಿತ ವರ್ಗಕ್ಕೆ ಆಗುತ್ತಿರುವ ಅನ್ಯಾಯಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು, ಸಾಮಾಜಿಕ ತಾಣದಲ್ಲಿ ಆತ ಹಾಕಿರುವ ಕೊನೆಯ ಹೇಳಿಕೆಯಿಂದ ಬಹಿರಂಗವಾಗಿದೆ. ರೋಹಿತ್ ವೇಮುಲಾಪರವಾಗಿ ಧ್ವನಿಯೆತ್ತಿದ ಜೆಎನ್‌ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಮತ್ತು ಅವರ ಗೆಳೆಯರನ್ನು ದೇಶದ್ರೋಹ ಆರೋಪದಲ್ಲಿ ಕೇಂದ್ರ ಸರಕಾರ ಜೈಲಿಗೆ ತಳ್ಳಿರುವುದು ದೇಶಾದ್ಯಂತ ಆಂದೋಲನಕ್ಕೆ ಕಾರಣವಾಯಿತು. ಇದಾದ ಬಳಿಕ ಜೆಎನ್‌ಯು ವಿದ್ಯಾರ್ಥಿ ನಜೀಬ್‌ನ ನಿಗೂಢ ನಾಪತ್ತೆಯ ಕಾರಣಕ್ಕಾಗಿಯೂ ಜೆಎನ್‌ಯು ಚರ್ಚೆಗೀಡಾಯಿತು. ನಜೀಬ್‌ನನ್ನು ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿ ಕೊಂದು ಹಾಕಿರುವುದಾಗಿ ಆರೋಪಗಳು ಕೇಳಿ ಬರುತ್ತವೆಯಾದರೂ, ಪೊಲೀಸರು ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಆರೋಪಿಗಳನ್ನು ಅಥವಾ ನಜೀಬ್‌ನನ್ನು ಪತ್ತೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವೆಲ್ಲದರ ಜೊತೆಗೆ ರಜನಿಕ್ರಿಶ್ ಎನ್ನುವ ದಲಿತ ಪ್ರತಿಭಾವಂತ ವಿದ್ಯಾರ್ಥಿ ಆತ್ಮಹತ್ಯೆಗೈದಿರುವುದು ದೇಶದ ಯುವ ಸಮೂಹಲವನ್ನು ಮತ್ತೆ ತತ್ತರಿಸುವಂತೆ ಮಾಡಿದೆ.
‘‘ಸಮಾನತೆಯು ನಿರಾಕರಿಸಲ್ಪಟ್ಟಾಗ ಪ್ರತಿಯೊಂದೂ ನಿರಾಕರಿಸಲ್ಪಡುತ್ತದೆ. ಎಂ.ಫಿಲ್/ಪಿಎಚ್‌ಡಿ ಪ್ರವೇಶಗಳಲ್ಲಿ ಸಮಾನತೆಯಿಲ್ಲ, ವೌಖಿಕ ಪರೀಕ್ಷೆಯಲ್ಲಿ ಸಮಾನತೆಯಿಲ್ಲ. ಇರುವುದೊಂದೇ.....ಸಮಾನತೆಯ ನಿರಾಕರಣೆ, ಪ್ರೊ.ಸುಖದೇವ ಥೋರಟ್ ಅವರ ಶಿಫಾರಸಿನ ನಿರಾಕರಣೆ, ಆಡಳಿತ ವಿಭಾಗದ ಬಳಿ ವಿದ್ಯಾರ್ಥಿಗಳ ಪ್ರತಿಭಟನೆಗೆ ನಿರಾಕರಣೆ, ದುರ್ಬಲ ವರ್ಗಗಳಿಗೆ ಶಿಕ್ಷಣದ ನಿರಾಕರಣೆ ’’ ಇಂದು ಆತ್ಮಹತ್ಯೆಗೆ ಮುನ್ನ ಸಂಶೋಧನಾ ವಿದ್ಯಾರ್ಥಿ ಸಾಮಾಜಿಕ ತಾಣದಲ್ಲಿ ಹಾಕಿರುವ ಕೊನೆಯ ಸಂದೇಶವಾಗಿದೆ. ರಜನಿ ಕ್ರಿಶ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನಲ್ಲದೆ, ರೋಹಿತ್ ವೇಮುಲಾ ಪರ ಹೋರಾಟದಲ್ಲೂ ಸಕ್ರಿಯನಾಗಿದ್ದ. ವಿವಿಧ ಸಾಂಸ್ಕೃತಿಕ ಚಳವಳಿಗಳಲ್ಲೂ ಮುಂಚೂಣಿಯಲ್ಲಿದ್ದ ಎಂದು ಆತನ ಗೆಳೆಯರು ತಿಳಿಸಿದ್ದಾರೆ.
ದಲಿತ ವಿದ್ಯಾರ್ಥಿಯ ಈ ಆತ್ಮಹತ್ಯೆ ಪ್ರಕರಣಕ್ಕೆ ದೇಶದ ಮೂಲೆ ಮೂಲೆಗಳಿಂದ ತೀವ್ರ ವಿಷಾದ ಮತ್ತು ಖಂಡನೆ ವ್ಯಕ್ತವಾಗುತ್ತಿದೆ.