ಮನುಷ್ಯರನ್ನು ಮಾನವೀಯತೆಯೆಡೆಗೆ ಕೊಂಡೊಯ್ಯುವ ಶಕ್ತಿ ಧಾರ್ಮಿಕ ಶಿಕ್ಷಣಕ್ಕಿದೆ: ಪಾಣಕ್ಕಾಡ್ ಹಮಿದಲಿ ತಂಙಳ್
ಕುಂಬ್ರ ಜಾಮಿಆ ಅಲ್ ಕೌಸರ್ ಶರೀಅತ್ ಕಾಲೇಜು ದ್ವಿತೀಯ ಸನದುದಾನ ಸಮ್ಮೇಳನ

ಪುತ್ತೂರು, ಮಾ.13: ಧಾರ್ಮಿಕ ಶಿಕ್ಷಣವು ವ್ಯಕ್ತಿಯನ್ನು ಪರಿಪೂರ್ಣ ಮಾನವರನ್ನಾಗಿ ಮಾಡಲು ಸಹಕಾರಿಯಾಗುತ್ತದೆ. ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣವೂ ಇಂದಿನ ಕಾಲಘಟ್ಟದಲ್ಲಿ ಅಗತ್ಯವಾಗಿದ್ದು, ಮನುಷ್ಯರನ್ನು ಮಾನವೀಯತೆಯೆಡೆಗೆ ಕೊಂಡೊಯ್ಯುವ ಶಕ್ತಿ ಧಾರ್ಮಿಕ ಶಿಕ್ಷಣಕ್ಕಿದೆ ಎಂದು ಸಯ್ಯದ್ ಪಾಣಕ್ಕಾಡ್ ಹಾಮಿದಲಿ ಶಿಹಾಬ್ ತಂಙಳ್ ಹೇಳಿದರು.
ಅವರು ಪುತ್ತೂರು ತಾಲೂಕಿನ ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಇದರ ವತಿಯಿಂದ ನಡೆಸಲ್ಪಡುವ ಜಾಮಿಯ ಅಲ್‌ಕೌಸರ್ ಶರೀಅತ್ ಕಾಲೇಜು ಇದರ ದ್ವಿತೀಯ ಸನದುದಾನ ಸಮ್ಮೇಳನದಲ್ಲಿ ಸನದುದಾನ ಪ್ರದಾನ ನಿರ್ವಹಿಸಿ ಮಾತನಾದರು.
ದಾರಿ ತಪ್ಪುವ ಯುವ ಸಮೂಹಕ್ಕೆ ಧಾರ್ಮಿಕ ಶಿಕ್ಷಣ ಮತ್ತು ಧಾರ್ಮಿಕ ವಿದ್ವಾಂಸರಿಂದ ಸದುಪದೇಶಗಳು ದೊರಕುವಂತಾಗಬೇಕು. ತಾನು ಪಡೆದ ಶಿಕ್ಷಣ ಜ್ಞಾನವನ್ನು ಇನ್ನೊಬ್ಬರಿಗೆ ಕಲಿಸುವ ಮೂಲಕ ಸಮುದಾಯದ ಅಭಿವೃದ್ದಿಗೆ ನಾವು ಕಾರಣೀಭೂತರಾಗಬೇಕು .ಕಾಲದ ಬೇಡಿಕೆಯಾದ ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣವನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಿ ನಾಡಿನ ಪ್ರತಿಭಾವಂತ ವಿದ್ಯಾವಂತರನ್ನು ರೂಪಿಸುವ ಕುಂಬ್ರದ ಕೆಐಯ ಕಾರ್ಯ ಶ್ಲಾಘನೀಯ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಸಯ್ಯದ್ ಎನ್‌ಪಿಎಂ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಮಾತನಾಡಿ, ಇಂದು ದೇಶಾದ್ಯಂತ ಸಮಸ್ತ ಧಾರ್ಮಿಕ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ಲಕ್ಷಾಂತರ ಮುಸ್ಲಿಂ ವಿದ್ವಾಂಸರು ಸಮಸ್ತದಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮುದಾಯದ ಐಕ್ಯತೆ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇಲ್ಲಿಂದ ಕೌಸರಿ ಬಿರುದುಪಡೆದು ತೆರಳುವ ಉಲೆಮಾಗಳು ಸಮುದಾಯದ ಅಭಿವೃದ್ದಿಗಾಗಿ ಕೈಜೋಡಿಸಬೇಕು. ಸದಾ ಉತ್ತಮ ಚಿಂತನೆಗಳನ್ನು ಮಾಡುವ ಮೂಲಕ ಭಾರತದ ಸತ್ಪ್ರಜೆಗಳಾಗಿ ದೇಶದ ಅಭಿವೃದ್ದಿಗೂ ಕಾರಣರಾಗಬೇಕು ಎಂದು ಹೇಳಿದರು. ಸಮಸ್ತದ ಉಲಮಾಗಳಿಗೆ ನಿರಂತರ ಬೇಡಿಕೆ ಹೆಚ್ಚಾಗುತ್ತಿದ್ದು ಪ್ರತೀ ಮೊಹಲ್ಲಾಗಳಲ್ಲೂ ಉಸ್ತಾದರುಗಳ ಬೇಡಿಕೆ ಇದ್ದು ಅದನ್ನು ಪೂರೈಸುವ ಕೆಲಸ ಸಮಸ್ತ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು. ಸಮುದಾಯದ ಸೇವೆಗೆ ಸದಾ ಮುಂಚೂಣಿಯಲ್ಲಿರಬೇಕು ಎಂದರು.
ಸಂಸ್ಥೆಯ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ ಖಾದರ್, ಉಲಮಾಗಳಿಂದ ಸಮುದಾಯದ ಶಕ್ತಿ ತುಂಬುವ ಕೆಲಸ ಆಗುತ್ತಿದೆ. ಯಾವುದೇ ದುಶ್ಚಟಗಳು, ಅನಿಷ್ಟ ಆಚರಣೆ, ಪದ್ದತಿಗಳು, ವ್ಯವಸನಗಳು ನಿಲ್ಲಬೇಕಾದರೆ ಅದನ್ನು ಕಾನೂನಿನ ಮೂಲಕ ಸಾಧ್ಯವಿಲ್ಲ. ಆಯಾ ಧರ್ಮದ ನೇತಾರರಿಂದ ಶ್ರಮಿಸಿದಲ್ಲಿ ಇದು ಸಾಧ್ಯ. ಇಂದು ಮನುಷ್ಯರು ಪರಸ್ಪರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದು, ಸಾಮಾಜಿಕ ತಾಣದ ಮೂಲಕ ಅವಹೇಳನ ಅಧಿಕವಾಗುತ್ತಿದೆ ಇದರಿಂದ ಪರಸ್ಪರ ಸೌಹಾರ್ಧತೆಗೆ ಅಡ್ಡಿಯಾಗುತ್ತಿದೆ. ಈ ಸನ್ನಿವೇಶದಲ್ಲಿ ಯುವ ಸಮುದಾಯ ಧಾರ್ಮಿಕವಾಗಿ ಜಾಗೃತರಾಗಬೇಕು, ಯುವ ಸಮೂಹವನ್ನು ಸರಿದಾರಿಗೆ ತರುವ ಶಕ್ತಿ ಧರ್ಮ ಪಂಡಿತರಿಗೆ ಮಾತ್ರವಿದೆ ಎಂದು ಹೇಳಿದರು.
ವ್ಯಾಟ್ಸಪ್ ಮತ್ತು ಫೇಸ್ ಬುಕ್‌ನಂತಹ ಸಾಮಾಜಿಕ ತಾಣದಲ್ಲಿ ಬಂದ ಮಾಹಿತಿಯನ್ನು ಜನ ತಕ್ಷಣಕ್ಕೆ ನಂಬಿ ಬಿಡುತ್ತಾರೆ. ಇದನ್ನು ಬಳಸಿಕೊಂಡು ದಾರಿ ತಪ್ಪುತ್ತಿರುವ ಯುವ ಸಮೂಹ ಸಾಮಾಜಿಕ ತಾಣದಲ್ಲಿ ಸುಳ್ಳು ಮಾಹಿತಿಯನ್ನು ರವಾನಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ. ರುಬೆಲ್ಲೋ ಲಸಿಕೆ ಹಾಕಿಸಬಾರದು ಎಂದು ವ್ಯಾಟ್ಸಪ್‌ನಲ್ಲಿ ಸುಳ್ಳು ಮಾಹಿತಿ ರವಾನೆ ಮಾಡಿದ್ದರು ಆ ಬಳಿಕ ಅದರಿಂದ ಏನೆಲ್ಲಾ ಅನಾಹುತವಾಗಿದೆ. ವ್ಯಾಟ್ಸಪ್ ಮಾಹಿತಿಯನ್ನೇ ಸತ್ಯ ಎಂದು ನಂಬಿರುವ ನೂರಾರು ಮಂದಿ ಮಕ್ಕಳಿಗೆ ಲಸಿಕೆಯನ್ನು ಕೊಡಿಸಲೇ ಇಲ್ಲ ಇದಕ್ಕೆ ಯಾರು ಹೊಣೆಗಾರರು ಪ್ರಶ್ನಿಸಿದರು.
ನಾವು ಹೆಚ್ಚು ಭಾಷೆಯನ್ನು ತಿಳಿದುಕೊಂಡಷ್ಟು ನಮ್ಮ ಜ್ಞಾನದ ಮಟ್ಟವೂ ವೃದ್ದಿಯಾಗುತ್ತದೆ. ಹೆಚ್ಚಿನವರಿಗೆ ಅರೆಬಿಕ್ ಭಾಷೆ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಶಾಲಾ ಪಠ್ಯ ಪುಸ್ತಕದಲ್ಲಿ ಅರೆಬಿಕ್ ಭಾಷೆಯನ್ನು ಐಚ್ಚಿಕ ಭಾಷೆಯಾಗಿ ಸೇರ್ಪಡೆಗೊಳಿಸಲು ಸರಕಾರ ಮುಂದಾಗಿದ್ದು ಮುಂದಿನ ಬಜೆಟ್ ಅವೇಶನದ ಬಳಿಕ ಈ ವಿಚಾರದ ಕುರಿತು ಸರಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ. ಶಾಲಾ ಪಠ್ಯ ಪುಸ್ತಕದಲ್ಲಿ ಐಚ್ಚಿಕ ವಿಷಯವಾಗಿ ಅರೆಬಿಕ್ ಭಾಷೆಯನ್ನು ಅಳವಡಿಸುವುದರ ಮೂಲಕ ಮಕ್ಕಳಿಗೂ ಭಾಷೆ ಕಲಿಯಲು ಅವಕಾಶವಾಗುತ್ತದೆ. ಯಾವುದೇ ಒತ್ತಡವಿಲ್ಲದೆ ಕೇವಲ ಐಚ್ಚಿಕ ವಿಷಯವಾಗಿ ಮಾತ್ರ ಅರೇಬಿಕ್ ಭಾಷೆಯನ್ನು ಕಲಿಯಲು ಆಸಕ್ತ ವಿದ್ಯಾರ್ಥಿಗಳು ಕಲಿಯಬಹುದು. ಈ ಕುರಿತು ನಾನು ಶಿಕ್ಷಣ ಸಚಿವರ ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಮುಂದಿನ ಬಜೆಟ್ ಅವೇಶನದ ಬಳಿಕ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಾರಿತರುವ ಕುರಿತು ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಮತೀಯವಾದಕ್ಕೆ ಮತೀಯವಾದವೇ ಉತ್ತರವಾಗಬಾರದು. ಜಾತ್ಯತೀತತೆ ನೆಲೆಗಟ್ಟಿನ ಮೇಲೆ ಮಾನವನ ಮನಸ್ಸುಗಳನ್ನು ಒಂದುಗೂಡಿಸಿ ಭವ್ಯ ಭಾರತ ನಿರ್ಮಾಣದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಮಾತನಾಡಿ, ಇಂದು ಧರ್ಮ, ಜಾತಿಗಳ ನಡುವೆ ಪರಸ್ಪರ ಅಪನಂಬಿಕೆ ಅಧಿಕವಾಗುತ್ತಿದ್ದು ಇದರಿಂದಾಗಿ ಸೌಹಾರ್ಧತೆಗೆ ಧಕ್ಕೆಯಾಗುತ್ತಿದೆ. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ಮಾತ್ರ ಪರಸ್ಪರ ಸಹೋದರತೆಯಿಂದ ಬದುಕಲು ಸಾಧ್ಯವಾಗುತ್ತದೆ. ಧಾರ್ಮಿಕ ಶಿಕ್ಷಣ ಸಂಸ್ಥೆಗಳು ವ್ಯಕ್ತಿಯನ್ನು ಸತ್ಪ್ರಜೆಯನ್ನಾಗಿ ಮೂಡಿಸುತ್ತಿದ್ದು, ಶಾಮತಿಯಿಂದ ಮಾತ್ರ ದೇಶದ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಹೇಳಿದರು.
ಸನದುದಾನ ಭಾಷಣ ಮಾಡಿದ ಸಮಸ್ತ ಕೇಂದ್ರ ಮುಶಾವರದ ಉಪಾಧ್ಯಕ್ಷ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್, ಶಿಕ್ಷಣವು ಮನುಷ್ಯನನ್ನು ಸುಸಂಸ್ಕೃತರಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕೆಐಸಿಯಲ್ಲಿ ಧಾರ್ಮಿಕ, ಲೌಖಿಕ ಶಿಕ್ಷಣ ಪಡೆದು ಸನದುಧಾರಿಗಳಾಗಿ ಹೊರಬರುವ ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಗೌರವ ನಿರ್ದೇಶಕ ಸಯ್ಯದ್ ಅಲೀ ತಂಙಳ್ ಕುಂಬೋಲ್ ದುವಾ ನೆರವೇರಿಸಿದರು. ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಹಾಜಿ ಕೆ ಪಿ ಅಹಮದ್ ಅಧ್ಯಕ್ಷತೆ ವಹಿಸಿದ್ದರು.
ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಜಿಪಂ ಸದಸ್ಯ ಎಂ ಎಸ್ ಮಹಮ್ಮದ್, ಮೂಡಿಗೆರೆ ಖಾಝಿ ಎಂ. ಎ. ಖಾಸಿಂ ಮುಸ್ಲಿಯಾರ್, ಮಾಡನ್ನೂರು ನೂರುಲ್‌ಹುದಾ ಅಕಾಡೆಮಿ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ, ವಾಫಿ ಸಂಸ್ಥೆಯ ಸಂಯೋಜಕ ಹಕೀಂ ಪೈಝಿ, ಶರೀಫ್ ಫೈಝಿ ಕಡಬ, ಇಬ್ರಾಹಿಂ ಬಾಖವಿ ಬಿಸಿರೋಡು, ಜಾಬಿರ್ ಬಾಖವಿ ಕಾಸರಗೋಡು, ಡಾ. ತಾಜುದ್ದೀನ್ ವಾಫಿ ಕಣ್ಣೂರು, ಆದಂ ಅಹ್ಸನಿ ಶೇಕಮಲೆ, ಇಬ್ರಾಹಿಂ ಹಾಜಿ ಸುಳ್ಯ, ಪುತ್ತೂರು ಬದ್ರಿಯಾ ಮಸೀದಿ ಖತೀಬ್ ಎಸ್. ಬಿ ದಾರಿಮಿ, ಉಪ್ಪಿನಂಗಡಿ ಮಾಲಿಕುದ್ದೀನಾರ್ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಮಸ್ಕತ್ ಕೆಐಸಿ ಗೌರವಾಧ್ಯಕ್ಷ ಉಮ್ಮರ್ ಮುಸ್ಲಿಯಾರ್ ನಂಜೆ, ಬುರೈದಾ ಸಮಿತಿ ಅಧ್ಯಕ್ಷ ಶಾಫಿ ಕೇಕನಾಜೆ, ಜಿಲ್ಲಾ ವಕ್ಫ್ ಸದಸ್ಯ ಪಿ.ಬಿ.ಹಸನ್ ಹಾಜಿ, ಕೆಐಸಿ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ರಝಾಕ್ ಕೂರ್ನಡ್ಕ, ಪ್ರದಾನ ಕಾರ್ಯದರ್ಶಿ ಕೆ.ಎಂ. ಬಾವ ಹಾಜಿ, ಟ್ರಸ್ಟಿಗಳಾದ ಅಬ್ದುಲ್ ರಹಿಮಾನ್ ಅಝಾನ್, ಎಂ.ಎ.ಹುಸೈನ್ ಕೆನರಾ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಮುಹಮ್ಮದ್ ಸಾಬ್ ಕೂರ್ನಡ್ಕ, ಇರ್ಶಾದ್ ಅರಗ ಕನ್ಸ್‌ಸ್ಟ್ರೆಕ್ಷನ್ ಪುತ್ತೂರು, ಎಂ.ಎಸ್. ಹಮೀದ್ ಪುಣಚ, ಅಬೂಬಕ್ಕರ್ ಕೂರ್ನಡ್ಕ, ಉಮ್ಮರ್ ಕರಾವಳಿ, ಉಸ್ಮಾನ್ ಯುನಿಟಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 6 ತಿಂಗಳಲ್ಲಿ ಪರಿಶುದ್ದ ಖುರ್‌ಆನ್ ಕಂಠಪಾಠ ಮಾಡಿದ ಹಾಫಿರ್ ಕೆಐಸಿ ವಿದ್ಯಾರ್ಥಿ ಹಾಫಿರ್ ತ್ವಾಹಾ ಸ್ವಾಲಿಹ್ ಅವರನ್ನು ಸನ್ಮಾನಿಸಲಾಯಿತು. ಎನ್‌ಪಿಎಂ ಝೈನುಲ್ ಆಬಿದೀನ್ ತಂಙಳ್ ಸನ್ಮಾನಿಸಿದರು.
.ಹಾಫಿರ್ ಸಯ್ಯದ್ ಸ್ವಾದಿಖ್ ಉಸ್ತಾದ್ ಕಿರಾಅತ್ ಪಠಿಸಿದರು. ಸಂಸ್ಥೆಯ ವ್ಯವಸ್ಥಾಪಕ ಕೆ ಆರ್ ಹುಸೈನ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಐಸಿ ಸಂಸ್ಥೆಯ ಪ್ರೊಪೆಸರ್ ಅನೀಸ್ ಕೌಸರಿ ಸ್ವಾಗತಿಸಿದರು. ಕೆಎಂಎ ಕೊಡುಂಗಾಯಿ ನಿರೂಪಿಸಿದರು. ಕೆಐಸಿ ಕೋಶಾಧಿಕಾರಿ ಕೆ.ಪಿ. ಸಾದಿಕ್ ಹಾಜಿ ವಂದಿಸಿದರು.







