ಪುತ್ತೂರಿನಲ್ಲಿ ಮತ್ತೆ ಆರಂಭಗೊಂಡ ವಾರದ ಸಂತೆ

ಪುತ್ತೂರು, ಮಾ.13: ಪುತ್ತೂರಿನಲ್ಲಿ ಕಳೆದ ಏಳು ತಿಂಗಳಿನಿಂದ ಗೊಂದಲದ ಗೂಡಾಗಿದ್ದು ಹಲವಾರು ವಾದ, ವಿವಾದ, ಚರ್ಚೆ, ಪ್ರತಿಭಟನೆಗೆ ಕಾರಣವಾಗಿದ್ದ ಪುತ್ತೂರಿನ ವಾರದ ‘ಸಂತೆರಗಳೆ'ಗೆ ಸಂಪೂರ್ಣ ತೆರೆಬಿದ್ದಿದ್ದು, ಸೋಮವಾರ ಈ ಹಿಂದಿನಂತೆಯೇ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಆರಂಭಗೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪ್ರತ್ಯೇಕವಾಗಿ ಇಂದು ಸಂತೆ ಉದ್ಘಾಟನೆಯನ್ನು ಮಾಡಿದೆ.
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಕಳೆದು ಸುಮಾರು 60-70 ವರ್ಷಗಳಿಂದ ನಡೆದುಕೊಂಡು ಬಂದಿದ್ದ ವಾರದ ಸಂತೆಯನ್ನು ಉಪವಿಭಾಗಾಧಿಕಾರಿಗಳ ಆದೇಶದ ಮೇರೆಗೆ 7 ತಿಂಗಳ ಹಿಂದೆ ಕಿಲ್ಲೆ ಮೈದಾನದಿಂದ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ನಗರಸಭೆಯ ಕಾಂಗ್ರೆಸ್ ಆಡಳಿತ ಎಪಿಎಂಸಿ ಪ್ರಾಂಗಣದಲ್ಲಿ ಸಂತೆಗೆ ಪೂರಕ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಆ ಬಳಿಕ ಕಿಲ್ಲೆ ಮೈದಾನದಲ್ಲಿ ರವಿವಾರ ನಡೆಸುವ ತೀರ್ಮಾನ ಕೈಗೊಂಡಿತ್ತು. ಆದರೆ ಭಾನುವಾರದ ಸಂತೆಗೂ ನಿರೀಕ್ಷಿತ ಬೆಂಬಲ ವ್ಯಕ್ತವಾಗಿರಲಿಲ್ಲ. ಅಂತಿಮವಾಗಿ ನಗರಸಭೆಯ ಆಡಳಿತ ವಾರದ ಸಂತೆಯನ್ನು ಸೋಮವಾರವೇ ನಡೆಸುವ ನಿರ್ಧಾರಕ್ಕೆ ಬಂದಿತ್ತು.
ಆರಂಭದಿಂದಲೂ ವಾರದ ಸಂತೆಯನ್ನು ಸೋಮವಾರ ಕಿಲ್ಲೆ ಮೈದಾನದಲ್ಲಿಯೇ ನಡೆಯಬೇಕು ಎಂಬ ನಿರ್ಣಯ ಕೈಗೊಳ್ಳುವಂತೆ ನಗರಸಭೆಯ ಸಾಮಾನ್ಯ-ವಿಶೇಷ ಸಭೆಯಲ್ಲಿ ಬಹುಮತವಿರುವ ವಿಪಕ್ಷ ಬಿಜೆಪಿ ಸದಸ್ಯರು ಆಗ್ರಹಿಸುತ್ತಾ ಬಂದಿದ್ದರು. ವಿಪಕ್ಷದ ಬಹುಮತದ ನಿರ್ಣಯವನ್ನು ದಾಖಲಿಸದ, ಮತಕ್ಕೂ ಹಾಕಲು ಅವಕಾಶ ನೀಡದ ಕಾಂಗ್ರೆಸ್ ಆಡಳಿತದ ವಿರುದ್ಧ ಸಮರ ಸಾರಿದ್ದರು. ಈ ಪ್ರಕರಣ ಹೈಕೋರ್ಟು ಮೆಟ್ಟಲೇರಿತ್ತು. ಈ ನಡುವೆ ಬಿಜೆಪಿ,ಕಾಂಗ್ರೆಸ್, ಜೆಡಿಎಸ್, ಸಿಪಿಎಂ ಪಕ್ಷಗಳ ಮುಖಂಡರು ಹಾಗೂ ಪುತ್ತೂರಿನ ವರ್ತಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ವಾರದ ಸಂತೆಯನ್ನು ಕಿಲ್ಲೆ ಮೈದಾನದಲ್ಲಿಯೇ ನಡೆಸುವಂತೆ ಒತ್ತಾಯ ಮಾಡಿದ್ದರು. ನಗರಸಭೆಯ ವಿಪಕ್ಷ ಸದಸ್ಯರು ರಾಜೇಶ್ ಬನ್ನೂರು ಅವರ ನೇತೃತ್ವದಲ್ಲಿ ಸಂತೆಯನ್ನು ಕಿಲ್ಲೆ ಮೈದಾನದಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ, ಪ್ರತಿಭಟನೆಯನ್ನೂ ನಡೆಸಿದ್ದರು.
ಸೋಮವಾರ ಬೆಳಿಗ್ಗೆ 6 ಗಂಟೆಯ ವೇಳೆಗೆ ಪುತ್ತೂರು ನಗರಸಭೆಯ ಉಪಾಧ್ಯಕ್ಷ ವಿಶ್ವನಾಥ ಗೌಡ, ವಿಪಕ್ಷ ಸದಸ್ಯರಾದ ರಾಜೇಶ್ ಬನ್ನೂರು ಮತ್ತಿತರರು ಸೇರಿಕೊಂಡು ತೆಂಗಿನಕಾಯಿ ಒಡೆಯುವ ಮೂಲಕ ಸಂತೆ ಪುನರಾರಂಭಕ್ಕೆ ಚಾಲನೆ ನೀಡಿದರು. ಆ ಬಳಿಕ 7 ಗಂಟೆಯ ವೇಳೆಗೆ ನಗರಸಭೆಯ ಆಡಳಿತ ಪಕ್ಷದ ವತಿಯಿಂದ ಪ್ರತ್ಯೇಕವಾಗಿ ಅಧ್ಯಕ್ಷೆ ಜಯಂತಿ ಬಲ್ನಾಡು , ಕಾಂಗ್ರೆಸ್ ಮುಖಂಡ ಹೇಮನಾಥ ಶೆಟ್ಟಿ ಕಾವು, ನಗರಸಭೆಯ ಸದಸ್ಯರಾದ ಎಚ್.ಮಹಮ್ಮದ್ ಆಲಿ,ಶಕ್ತಿ ಸಿನ್ಹ ಅವರು ತೆಂಗಿನಕಾಯಿ ಒಡೆದು ಉದ್ಘಾಟಿಸಿದರು.







