ಕಣ್ಣಿಗೆ ಕಾಣುವ ದೇವರನ್ನು ಗೌರವಿಸುವ ಕೆಲಸ ಆಗಬೇಕಿದೆ: ಮಾಣಿಲ ಶ್ರೀ
ಉಳ್ಳಾಲ, ಮಾ.13: ಹೆತ್ತವರು, ವಿದ್ಯೆ ಕಲಿಸಿದ ಗುರು, ಅನ್ನ ನೀಡುವ ರೈತ, ದೇಶ ಕಾಯುವ ಯೋಧ, ಕಷ್ಟಕಾಲದಲ್ಲಿ ಆಪದ್ಭಾಂದವನಾಗುವ ನೆರೆಹೊರೆಯವರು ಕಣ್ಣಿಗೆ ಕಾಣುವ ದೇವರಾಗಿದ್ದು ಅವರನ್ನು ಪ್ರೀತಿಯಿಂದ ಕಾಣುವ ಪ್ರಯತ್ನ ನಮ್ಮದಾಗಬೇಕು ಎಂದು ಶ್ರೀ ಕ್ಷೇತ್ರ ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನ್‌ದಾಸ ಪರಮಹಂಸ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕನೀರುತೋಟ ಲೋಕಯ್ಯಪಾಲು ಶ್ರೀ ನಾಗಬ್ರಹ್ಮ, ಮಹಾಕಾಳಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಶಿಲಾನ್ಯಾಸ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸಂಪತ್ತಿನಿಂದ ದೇವನನ್ನು ಕಾಣಲು ಅಸಾಧ್ಯ, ಅದರ ಬದಲು ಆತ್ಮಶಕ್ತಿ, ಧೃಡತೆ, ಪ್ರೀತಿ, ಧೃಡವಾದ ನಂಬಿಕೆ ಹೊಂದುವುದು ಮುಖ್ಯ. ಹೋಮ, ಬ್ರಹ್ಮಕಲಶ, ಆರಾಧನೆ ಇಂದು ವೈಭವೀಕರಣಗೊಳ್ಳುತ್ತಿದ್ದರೂ ಉತ್ತಮ ಕಾರ್ಯವಾಗಿರುವುದರಿಂದ ಯಾವುದೇ ಸಮಸ್ಯೆಯಿಲ್ಲ ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಶ್ರೀ ಹರಿನಾರಾಯಣ ಅಸ್ರಣ್ಣ ಮಾತನಾಡಿ, ಒಂದು ಧಾರ್ಮಿಕ ಕ್ಷೇತ್ರ ನಿರ್ಮಾಣವಾದರೆ ಮುಂದೆ ಯಾವ ರೀತಿ ನಡೆಯಬೇಕು ಎನ್ನುವ ಚಿಂತನೆಯೂ ಅಗತ್ಯ, ಆದರೆ ಇಂದು ಬ್ರಹ್ಮಕಲಶ, ಉತ್ಸವಗಳ ವೇದಿಕೆಗಳು ಸಿನಿಮಾ ನೃತ್ಯದ ಮನರಂಜನೆಗೆ ಸೀಮಿತವಾಗುತ್ತಿದೆ. ಇದಕ್ಕಾಗಿ ಲಕ್ಷ ಹಣ ಕ್ಷೇತ್ರದಲ್ಲಿ ನಡೆಯಬೇಕಾದ ನಿತ್ಯಕರ್ಮದ ಖರ್ಚಿನ ವಿಚಾರದಲ್ಲಿ ಹಿಂಜರಿಯುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ವೇದಮೂರ್ತಿ ಶ್ರೀ ಮುರಳೀಧರ ತಂತ್ರಿ ಎಡಪದವು ಹಾಗೂ ಕ್ಷೇತ್ರದ ತಂತ್ರಿಗಳಾದ ಶ್ರೀ ನಾಗೇಂದ್ರ ಕೆದಿಲಾಯ ನೇತೃತ್ದಲ್ಲಿ ವೈಧಿಕ ವಿಧಾನ ಹಾಗೂ ಭೂಮಿ ಪೂಜೆ ನೆರವೇರಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ನನ್ಯ ಅಚ್ಯುತ ಮೂಡೆತ್ತಾಯ ಅಧ್ಯಕ್ಷತೆ ವಹಿಸಿದ್ದರು.
ಕಂಕನಾಡಿ ಬ್ರಹ್ಮ ಬೈದರ್ಕಳ ಗರೋಡಿಯ ಅಧ್ಯಕ್ಷ ಚಿತ್ತರಂಜನ್ ಗರೋಡಿ, ಕೊಲ್ಯ ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಬಂಗೇರ, ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ, ಕೊಲ್ಯ ಶ್ರೀ ಸ್ವಾಮಿ ರಮಾನಂದಾಶ್ರಮ ಸೇವಾ ಸಮಿತಿಯ ಅಧ್ಯಕ್ಷ ಮಧುಸೂಧನ್ ಅಯ್ಯರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲೋಕೇಶ್ ದೇಲಂಪಾಡಿ, ಮಾತೃ ಮಂಡಳಿ ಅಧ್ಯಕ್ಷೆ ಸುನಿತಾ ಪ್ರವೀಣ್ ಕುಜುಮಗದ್ದೆ, ಗಂಗಾಧರ ಶೆಟ್ಟಿ ಮಡಂತ್ಯಾರುಗುತ್ತು, ಉದ್ಯಮಿ ಕೇಶವ, ಶ್ರೀನಿವಾಸ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಪ್ರವೀಣ್ ಎಸ್.ಕುಂಪಲ ಸ್ವಾಗತಿಸಿದರು. ಸುಕೇಶ್ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.







