ಮಾ.14ರಂದು ವೈಕಮ್ ಬಶೀರ್‌ರವರ ಕಥೆಯಾಧಾರಿತ ನಾಟಕ 'ಗೋಡೆಗಳು' ಪ್ರದರ್ಶನ
ಮಂಗಳೂರು.ಮಾ,13:ಮಲಯಾಳಂ ಭಾಷೆಯ ಖ್ಯಾತ ಕತೆಗಾರ ವೈಖಂ ಮುಹಮ್ಮದ್ ಬಶೀರ್‌ರವರ ಮೂಲಕತೆಯನ್ನು ಹೊಂದಿರುವ ಎಸ್.ಗಂಗಾಧರ ಯ್ಯನವರು ಕನ್ನಡಕ್ಕೆ ಅನುವಾದಿಸಿರುವ ಕನ್ನಡ ರಂಗನಾಟಕ 'ಗೋಡೆಗಳು' ಮಾ.14ರಂದು ಸಂಜೆ 7 ಗಂಟೆಗೆ ನಗರದ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.
ಮಂಗಳೂರಿನ ಸಹಮತ ಫಿಲಂ ಸೊಸೈಟಿ,ರೊಶನಿ ನಿಲಯದ ಇಂಗ್ಲೀಷ್, ಹಿಂದಿ, ಕನ್ನಡ ಸಾಹಿತ್ಯ ಸಂಘದ ಆಶ್ರಯದಲ್ಲಿ ರೊಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ವಿಭಾಗ ಅರ್ಪಿಸುವ ಸತಿಶ್ ತಿಪಟೂರು ನಿರ್ದೇಶನದಲ್ಲಿ ಸಹಮತ ರಂಗತಂಡದ ಸದಸ್ಯರಿಂದ ನಾಟಕ ಪ್ರದರ್ಶನ ಗೊಳ್ಳಲಿದೆ.
ದೇಶದ ಸ್ವಾತಂತ್ರ ಸಮರದ ಹೊತ್ತಿನಲ್ಲಿ ಕ್ರಾಂತಿಕಾರಿ ಬರಹ,ರಾಜದ್ರೋಹ ಅಪಾದನೆಯಲ್ಲಿ ರಾಜಕೀಯ ಖೈದಿಯಾಗಿ ಜೈಲು ಸೇರುವ ಬಶೀರ್,ಸೆಂಟ್ರಲ್ ಜೈಲಿನ ಅಸಹನೀಯ ಬದುಕಿನ ನಡುವೆಯೂ ಗುಲಾಬಿ ಗಿಡಗಳನ್ನು ನೆಟ್ಟು ತನ್ನ ಸುತ್ತ ಸಹನೀಯವಾದ ವಾತವರಣವನ್ನು ನಿರ್ಮಿಸಿಕೊಳ್ಳುತ್ತಾನೆ.ಜೈಲಿನಲ್ಲಿ ಹೆಣ್ಣು ಮತ್ತು ಗಂಡು ಖೈದಿಗಳ ನಡುವೆ ದೈತ್ಯ ಗೋಡೆಗಳ ಆವರಣ ಇದ್ದರೂ ಅವುಗಳ ನಡುವೆ ಇದ್ದ ಬಶೀರ್ ಮತ್ತು ನಾರಾಯಣಿ ನಡುವೆ ಪ್ರೀತಿ ಹುಟ್ಟುತ್ತದೆ.ಜೈಲಿನೊಳಗೂ ಈ ಪ್ರೆಮ ಹಿತಕರವಾದ ಸ್ವತಂತ್ರ ಭಾವನೆಯನ್ನು ಮೂಡಿಸುತ್ತದೆ.ಜೈಲಿನಿಂದ ಹೊರ ಬರುವ ಸಮಯ ಬಂದಾಗ ಆ ಸ್ವತಂತ್ರವೇ ಬಶೀರ್‌ಗೆ ಬಂಧನವಾಗಿ ಭಾಸವಾಗುತ್ತದೆ.
ನಾಟಕದ ಹೆಸರು ಸೂಚಿಸುವ 'ಗೋಡೆಗಳು' ಮನುಷ್ಯ ಸಂಬಂಧಗಳ ನಡುವೆ ಅಡ್ಡಿಯಾಗಿ ನಿಂತಿರುವ ಜಾತಿ,ಧರ್ಮ,ಭಾಷೆ,ದೇಶಗಳ ಅಂತಸ್ತುಗಳ,ಅಹಂಗಳ ಪ್ರತೀಕವಾಗಿದೆ.ಈ ಎಲ್ಲೆಗಳನ್ನು ಮೀರಿದ ಮಾನವ ಸಂಬಂಧಗಳ ತುಡಿತ ಈ ಕಥೆಯ ಹಂದರದಲ್ಲಿದೆ.







