ಅನಿವಾಸಿ ಭಾರತೀಯ ನೀತಿ ಜಾರಿ: ಡಾ.ಆರತಿ ಕೃಷ್ಣನ್
ಉಡುಪಿ, ಮಾ.13: ಕರ್ನಾಟಕ ಸರಕಾರ ರಾಜ್ಯದಿಂದ ವಲಸೆ ಹೋಗಿ ವಿಶ್ವದ ಇತರ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು/ ಅನಿವಾಸಿ ಕನ್ನಡಿಗರ ಕ್ಷೇಮಾಭಿವೃದ್ಧಿ, ಹೊರದೇಶದಲ್ಲಿರುವ ಕನ್ನಡಿಗರನ್ನು ಕೈಗಾರಿಕೆ, ಶಿಕ್ಷಣ, ಇಂಧನ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ವಸತಿ, ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ಆಕರ್ಷಿಸುವ ಉದ್ದೇಶದಿಂದ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ ಎಂದು ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣನ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ವಿದೇಶಗಳಲ್ಲಿ ಪ್ರಚಾರ ಪಡಿಸುವುದು ಈ ಸಮಿತಿಯ ಸ್ಥಾಪನೆಯ ಹಿಂದಿನ ಉದ್ದೇಶವಾಗಿದೆ ಎಂದರು.
ಇದಕ್ಕಾಗಿ ರಾಜ್ಯ ಸರಕಾರ ಸಮಗ್ರವಾದ ಅನಿವಾಸಿ ಭಾರತೀಯ ನೀತಿಯೊಂದನ್ನು ರಚಿಸಿ ಕಳೆದ ಜ.6ರಂದು ಜಾರಿಗೆ ತಂದಿದೆ ಎಂದವರು ತಿಳಿಸಿದರು. ಈ ನೀತಿಯಲ್ಲಿ ಅನಿವಾಸಿ ಭಾರತೀಯರ (ಕನ್ನಡಿಗರು) ಆಶಾವಾದ, ಬೇಡಿಕೆಗಳು ಹಾಗೂ ನಿರೀಕ್ಷೆಗಳನ್ನು ಸಹ ಅಳವಡಿಸಲಾಗಿದೆ. ಇದು ಅನಿವಾಸಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ದೇಶಗಳ ನಡುವಿನ ಸಂಬಂಧವನ್ನು ಉತ್ತಮಪಡಿಸು ತ್ತದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಈಗ ಸುಮಾರು ನಾಲ್ಕು ಲಕ್ಷ ಕನ್ನಡಿಗರು ವಿದೇಶಗಳಲ್ಲಿ ನೆಲೆಸಿದ್ದಾರೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಅತ್ಯಧಿಕ ಮಂದಿ- ಸುಮಾರು 1.90ಲಕ್ಷ- ನೆಲೆಸಿದ್ದರೆ, ಅಮೆರಿಕಕ್ಕೆ (90,000) ಎರಡನೇ ಸ್ಥಾನ. ಆದರೆ ಇವುಗಳ ಸರಿಯಾದ ಮಾಹಿತಿ ಸರಕಾರದ ಬಳಿ ಇಲ್ಲ. ಇದೀಗ ಅನಿವಾಸಿ ಕನ್ನಡಿಗರ ಡೇಟಾವನ್ನು ಸಮಿತಿ ಕಲೆ ಹಾಕುತ್ತಿದೆ. ಇದು ಪೂರ್ಣ ಗೊಂಡಾಗ ಅನಿವಾಸಿಗರ ಸಮಗ್ರ ಮಾಹಿತಿ ಲಭ್ಯವಾಗುತ್ತದೆ ಎಂದರು.
ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯಮಟ್ಟದಲ್ಲಿ ಸಮಿತಿಯನ್ನು ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಈ ಸಮಿತಿ ರಾಜ್ಯಮಟ್ಟದಲ್ಲಿ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲಿದೆ.
ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ಇದ್ದು, ಆಯಾ ಜಿಲ್ಲೆಗಳಲ್ಲಿರುವ ಸಮಸ್ಯೆಯನ್ನು ಈ ಸಮಿತಿ ಪರಿಶೀಲಿಸಿ ಪರಿಹರಿಸಲಿದೆ.
ಅನಿವಾಸಿ ಕನ್ನಡಿಗರು ಮತ್ತು ಸಂಘಟನೆಗಳೊಂದಿಗೆ ಸಂಪರ್ಕ ಕಲ್ಪಿಸುವ ಜಾಲತಾಣ (ವೆಬ್‌ಸೈಟ್) ಸೃಷ್ಟಿಸಿ, ದತ್ತಾಂಶ ಸಂಗ್ರಹಿಸಿ ಸಂಪರ್ಕ ಕಲ್ಪಿಸುವ ಗುರಿ ಇದೆ. ಅನಿವಾಸಿ ಕನ್ನಡಿಗರಿಗಾಗಿಯೇ ಪ್ರತ್ಯೇಕ ಸ್ಮಾರ್ಟ್‌ಕಾರ್ಡ್ ಕೊಡುವ ಯೋಜನೆ ಇದೆ. ಅನಿವಾಸಿ ಕನ್ನಡಿಗರಿಗೆ ಅಪಘಾತ ಸಂಭವಿಸಿದಾಗ ಎರಡು ಲಕ್ಷ ರೂ.ಗಳ ವಿಮಾ ಸೌಲಭ್ಯ ಕಲ್ಪಿಸಲು ಪ್ರಯತ್ನ ನಡೆದಿದೆ ಎಂದು ಡಾ.ಆರತಿ ಕೃಷ್ಣನ್ ತಿಳಿಸಿದರು.
ವಿದೇಶಗಳಲ್ಲಿ ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಭಾಷೆಯನ್ನು ಉತ್ತೇಜಿಸಲು ಹಾಗೂ ಕರ್ನಾಟಕದ ಸಾಂಸ್ಕೃತಿಕ ಉತ್ಸವ ನಡೆಸಲು ಪ್ರೋತ್ಸಾಹಿಸಲಾಗುವುದು. ಅಲ್ಲಿನ ಕನ್ನಡಿಗರು ಸಮಸ್ಯೆಗೆ ಸಿಲುಕಿದಾಗ, ಸಮಿತಿಯ ಮೂಲಕ ಕೇಂದ್ರ ಸರಕಾರ ಹಾಗೂ ರಾಯಭಾರ ಕಚೇರಿಗಳ ಸತತ ಸಂಪರ್ಕ ಸಾಧಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಅನಿವಾಸಿ ಭಾರತೀಯರು ಮೃತರಾದಾಗ ಅವರ ಮೃತದೇಹವನ್ನು ಸ್ವದೇಶಕ್ಕೆ ತರಲು ನೆರವಾಗುವುದು, ವಿದೇಶಗಳಲ್ಲಿ ಕನ್ನಡಿಗ ಕಾರ್ಮಿಕರು ಶೋಷಣೆಗೊಳಗಾದಾಗ ಅವರಿಗೆ ತುರ್ತು ಆರ್ಥಿಕ ನೆರವು ನೀಡಿ ಸ್ವದೇಶಕ್ಕೆ ಮರಳಲು ನೆರವಿನ ಹಸ್ತ ನೀಡುವುದು ಸಮಿತಿಯ ಉದ್ದೇಶವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು.







