ದಲಿತ ನೌಕರರ ಭಡ್ತಿ ಮೀಸಲಾತಿ ರದ್ದು ಖಂಡಿಸಿ ಪ್ರತಿಭಟನೆ
ಚಿತ್ರದುರ್ಗ, ಮಾ.13: ದಲಿತ ನೌಕರರ ಭಡ್ತಿ ಮೀಸಲಾತಿಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿರುವುದರ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಡಾ.ಎನ್.ಮೂರ್ತಿ ಸ್ಥಾಪಿತ) ಜಿಲ್ಲಾ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರಕಾರ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ನೂತನ ಕಾನೂನು ಜಾರಿ ಮಾಡಲು ಒತ್ತಾಯಿಸಬೇಕು ಮತ್ತು ಕೇಂದ್ರ ಸರಕಾರ ಮಸೂದೆ ಅಂಗೀಕರಿಸಿ ಶತಶತಮಾನಗಳಿಂದಲೂ ಶೋಷಣೆ ಅನುಭವಿಸಿಕೊಂಡು ಬರುತ್ತಿರುವ ದಲಿತ ನೌಕರರಿಗೆ ನ್ಯಾಯ ಒದಗಿಸಬೇಕೆಂದು ಧರಣಿ ನಿರತರು ಆಗ್ರಹಿಸಿದರು.
ಪರಿಶಿಷ್ಟ ಜಾತಿ, ಪಂಗಡದವರಿಗೆ ಉದ್ಯೋಗದಲ್ಲಿ ಮೀಸಲಾತಿ ದೊರಕಲಿ ಎನ್ನುವ ಕಾರಣಕ್ಕಾಗಿ ಸಂವಿಧಾನದ ಅನುಚ್ಛೇದ16(4)ರಲ್ಲಿ ಪ್ರದತ್ತ ಮಾಡಲಾಗಿದ್ದ ಭಡ್ತಿ ಮೀಸಲಾತಿ ರದ್ದಾಗಿರುವುದು ಶೋಷಿತ ಸಮುದಾಯವನ್ನು ತಲ್ಲಣಗೊಳಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರಕಾರ ಭಡ್ತಿ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಸಂವಿಧಾನದ 117ನೆ ಕಾಯ್ದೆಯನ್ನು ತಿದ್ದುಪಡಿ ಮಾಡಿ ಭಡ್ತಿ ಮೀಸಲಾತಿ ನೀಡಬೇಕು. ಖಾಸಗಿ ಕ್ಷೇತ್ರದ ಉದ್ಯೋಗ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಲು ಮಸೂದೆ ರಚಿಸಬೇಕು.
ದೇಶಾದ್ಯಂತ ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿ ಒಂದು ಲಕ್ಷದಷ್ಟು ಬಾಕಿಯಿರುವ ಪರಿಶಿಷ್ಟ ಜಾತಿ/ಪಂಗಡದ ಹುದ್ದೆಗಳನ್ನು ಭರ್ತಿ ಮಾಡಬೇಕು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೆಂಗಳೂರು ವಿಭಾಗೀಯ ಪ್ರಧಾನ ಕಾರ್ಯದರ್ಶಿ ನೇಹಮಲ್ಲೇಶ್, ಗೌರವಾಧ್ಯಕ್ಷ ಅಂಗಡಿ ಮಂಜಣ್ಣ, ಸಂಘಟನಾ ಸಂಚಾಲಕ ಟಿ.ಚಂದ್ರಪ್ಪ, ಉಪಾಧ್ಯಕ್ಷ ಟಿ.ತಿಮ್ಮರಾಜ್, ಸಾಗಲಗಟ್ಟೆ ಜಯಪ್ಪ, ಜಿಲ್ಲಾಧ್ಯಕ್ಷ ಮುಹಮ್ಮದ್ ಇರ್ಫಾನ್ ಮತ್ತಿತರರಿದ್ದರು.







