ಇಂಡಿಯನ್ ವೇಲ್ಸ್: ಜೊಕೊವಿಕ್, ಫೆಡರರ್, ನಡಾಲ್ ಮೂರನೆ ಸುತ್ತಿಗೆ

ಕ್ಯಾಲಿಫೋರ್ನಿಯ, ಮಾ.13: ನೊವಾಕ್ ಜೊಕೊವಿಕ್, ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ಎಟಿಪಿ ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿಯಲ್ಲಿ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಇಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ದ್ವಿತೀಯ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.2ನೆ ಆಟಗಾರ ಜೊಕೊವಿಕ್ 46ನೆ ರ್ಯಾಂಕಿನ ಕೈಲ್ ಎಡ್ಮಂಡ್‌ರನ್ನು 6-4, 7-6(7/5) ನೇರ ಸೆಟ್‌ಗಳ ಅಂತರದಿಂದ ಮಣಿಸಿ ಮುಂದಿನ ಸುತ್ತಿಗೇರಿದರು. ಈ ಗೆಲುವಿನ ಮೂಲಕ ಆರನೆ ಬಾರಿ ಇಂಡಿಯನ್ ವೇಲ್ಸ್ ಪ್ರಶಸ್ತಿ ಜಯಿಸುವತ್ತ ಚಿತ್ತವಿರಿಸಿದ್ದಾರೆ.
ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಮಾಜಿ ಯುಎಸ್ ಓಪನ್ ಚಾಂಪಿಯನ್ ಜುವಾನ್ ಮಾರ್ಟಿನ್ ಡೆಲ್‌ಪೊಟ್ರೊರನ್ನು ಎದುರಿಸಲಿದ್ದಾರೆ. ಅರ್ಜೆಂಟೀನದ ಡೆೆಲ್ ಪೊಟ್ರೊ ತಮ್ಮದೇ ದೇಶದ ಫೆಡೆರಿಕೊ ಡೆಲ್ ಬೊನಿಸ್‌ರನ್ನು 7-6(7/5), 6-3 ಸೆಟ್‌ಗಳ ಅಂತರದಿಂದ ಮಣಿಸಿದರು.
ಸ್ಪಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ ಕೇವಲ 51 ನಿಮಿಷಗಳ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಸ್ಟೆಫಾನ್ ರಾಬರ್ಟ್‌ರನ್ನು 6-2, 6-1 ರಿಂದ ಮಣಿಸಿ ಮೂರನೆ ಸುತ್ತಿಗೆ ತಲುಪಿದ್ದಾರೆ. ಮತ್ತೊಂದು ಎರಡನೆ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಅರ್ಜೆಂಟೀನದ ಗುಡೊ ಪೆಲ್ಲಾರನ್ನು 6-3, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
‘‘3ನೆ ಸುತ್ತಿಗೆ ಪ್ರವೇಶ ಪಡೆದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಕಳೆದ ವರ್ಷ ಮಂಡಿನೋವಿನಿಂದಾಗಿ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಆಡಿರಲಿಲ್ಲ. ಈಗ ಅಂತಹ ಯಾವುದೇ ಸಮಸ್ಯೆಯಿಲ್ಲ’’ ಎಂದು ಫೆಡರರ್ ಹೇಳಿದ್ದಾರೆ.
ನಾಲ್ಕನೆ ಶ್ರೇಯಾಂಕದ ಜಪಾನ್‌ನ ಕೀ ನಿಶಿಕೊರಿ ಬ್ರಿಟನ್‌ನ ಡೇನಿಯಲ್ ಎವನ್ಸ್ಸ್ ವಿರುದ್ಧ 6-3, 6-4 ಅಂತರದಿಂದ ಜಯ ಗಳಿಸಿದರು, ಆರನೆ ಶ್ರೇಯಾಂಕದ ಮರಿನ್ ಸಿಲಿಕ್ 19ರ ಹರೆಯದ ಅಮೆರಿಕದ ಟೇಲರ್ ಫ್ರಿಟ್ಝ್‌ರನ್ನು 4-6, 7-5, 6-4 ಸೆಟ್‌ಗಳ ಅಂತರದಿಂದ ಮಣಿಸಿ ಮುಂದಿನ ಸುತ್ತಿಗೆ ತೇರ್ಗಡೆಯಾದರು.
ಮುಗುರುಝ ನಾಲ್ಕನೆ ಸುತ್ತಿಗೆ ಲಗ್ಗೆ: ಫ್ರೆಂಚ್ ಓಪನ್ ಚಾಂಪಿಯನ್ ಮುಗುರುಝ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ 4ನೆ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ರವಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಮುಗುರುಝ ಯುವ ಆಟಗಾರ್ತಿ ಕೇಯ್ಲಿ ಡೇ ಅವರನ್ನು 3-6, 7-5, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.
7ನೆ ಶ್ರೇಯಾಂಕಿತೆ ಮುಗುರುಝ ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾರನ್ನು ಎದುರಿಸಲಿದ್ದಾರೆ. ಸ್ವಿಟೋಲಿನಾ ಆಸ್ಟ್ರೇಲಿಯದ ಡರಿಯಾ ಗವ್ರಿಲೋವಾರನ್ನು 6-2, 6-1 ಸೆಟ್‌ಗಳ ಅಂತರದಿಂದ ಮಣಿಸಿದರು.







