ಚಾಂಪಿಯನ್ ಟ್ರೋಫಿ ಧೋನಿಯ ಮುಂದಿನ ಭವಿಷ್ಯ ನಿರ್ಧರಿಸಲಿದೆ: ಬ್ಯಾನರ್ಜಿ
ಕೋಲ್ಕತಾ, ಮಾ.13: ಇನ್ನು ಮೂರು ತಿಂಗಳಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಭಾರತದ ಅತ್ಯಂತ ಯಶಸ್ವಿ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿಯ ಮುಂದಿನ ಭವಿಷ್ಯ ನಿರ್ಧರಿಸಲಿದೆ ಎಂದು ಧೋನಿಯ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.
‘‘ಪ್ರಸ್ತುತ ಚಾಂಪಿಯನ್ಸ್ ಟ್ರೋಫಿಯತ್ತ ಧೋನಿ ಗಮನ ನೀಡುತ್ತಿದ್ದಾರೆ. ಒಂದು ವೇಳೆ ಆ ಟೂರ್ನಿಯಲ್ಲಿ ಅವರು ಯಶಸ್ಸು ಸಾಧಿಸಿದರೆ ಅವರು 2019ರ ಏಕದಿನ ವಿಶ್ವಕಪ್ ತನಕ ಮುಂದುವರಿಯಬಹುದು’’ ಎಂದು ಸೋಮವಾರ ಅಂಡರ್-14 ಕ್ರಿಕೆಟ್ ಟೂರ್ನಮೆಂಟ್‌ನ್ನು ಅನಾವರಣಗೊಳಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
‘‘ಧೋನಿಗೆ ಈ ಹಿಂದಿನಷ್ಟು ಸ್ಟ್ರೈಕ್‌ರೇಟ್‌ನಲ್ಲಿ ಆಡಲು ಸಾಧ್ಯವಿಲ್ಲ. ಅವರಲ್ಲಿ ಶಕ್ತಿಯಿದೆ ಹಾಗೂ ಪಂದ್ಯವನ್ನು ವಿಮರ್ಶಿಸುವ ಗುಣವಿದೆ.ಇದು ಅವರಲ್ಲಿರುವ ವಿಶೇಷತೆ. ಚಾಂಪಿಯನ್ ಟ್ರೋಫಿಯಲ್ಲಿ ಸಜ್ಜಾಗುವ ಉದ್ದೇಶದಿಂದ ದೇಶೀಯ ಏಕದಿನ ಟೂರ್ನಿ ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ’’ ಎಂದು ಬ್ಯಾನರ್ಜಿ ತಿಳಿಸಿದರು.
ಧೋನಿಯನ್ನು ಐಪಿಎಲ್ ಪುಣೆ ತಂಡದ ನಾಯಕತ್ವದಿಂದ ಕೆಳಗಿಳಿಸಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಬ್ಯಾನರ್ಜಿ,‘‘ಅದು ತಂಡದ ಮಾಲಕರ ನಿರ್ಧಾರವಾಗಿರುವಂತೆ ಕಾಣುತ್ತಿದೆ. ಧೋನಿಗೆ ಪುಣೆ ತಂಡದಲ್ಲಿ ಆಡದೇ ಬೇರೆ ಆಯ್ಕೆಯೇ ಇಲ್ಲ. ಧೋನಿ ಟೆಸ್ಟ್‌ನಿಂದ ನಿವೃತ್ತಿಯಾದಾಗ, ಏಕದಿನ ನಾಯಕತ್ವ ತೊರೆಯುವ ಮೊದಲು ಯಾರಿಗೂ ಈ ವಿಷಯವನ್ನು ಹೇಳಿರಲಿಲ್ಲ’’ ಎಂದರು.







