ಐಪಿಎಲ್‌ನಲ್ಲಿ ಮಿಚೆಲ್ ಮಾರ್ಷ್ ಅಲಭ್ಯ?

ಪುಣೆ, ಮಾ.13: ಆಸ್ಟ್ರೇಲಿಯದ ಆಲ್‌ರೌಂಡರ್ ಮಿಚೆಲ್ ಮಾರ್ಷ್ 10ನೆ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಮಾರ್ಷ್ ಅನುಪಸ್ಥಿತಿಯು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ ತೀವ್ರ ಹಿನ್ನಡೆ ಯಾಗುವುದು ಖಚಿತ. 25ರ ಹರೆಯದ ಮಾರ್ಷ್ ಈಗ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ನಡುವಿನ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾಗವಹಿಸಿದ ಬಳಿಕ ಗಾಯಗೊಂಡಿದ್ದರು. ಭುಜನೋವಿನಿಂದ ಬಳಲುತ್ತಿರುವ ಮಾರ್ಷ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ಗಾಯದ ಸಮಸ್ಯೆ ಎದುರಿಸುತ್ತಿರುವ ಮಾರ್ಷ್ ದೀರ್ಘಕಾಲ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ ಎಂದು ಸೋಮವಾರ ಟ್ವೀಟ್ ಮಾಡಿರುವ ಕ್ರಿಕೆಟ್ ಆಸ್ಟ್ರೇಲಿಯ ಮಾರ್ಷ್ ಚೇತರಿಸಿಕೊಳ್ಳಲು ಎಷ್ಟು ಸಮಯಬೇಕೆಂದು ಬಹಿರಂಗಪಡಿಸಿಲ್ಲ.
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಏಳನೆ ಸ್ಥಾನ ಪಡೆದಿದ್ದ ಪುಣೆ ತಂಡ ಈ ವರ್ಷ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿತ್ತು. 2010ರಲ್ಲಿ ಐಪಿಎಲ್‌ಗೆ ಕಾಲಿಟ್ಟ ಬಳಿಕ ಮಾರ್ಷ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಶಕ್ತಿ ತುಂಬಬಲ್ಲ ಮಾರ್ಷ್ ಅವರ ಬೌಲಿಂಗ್‌ನ ಮೂಲಕ ಪುಣೆ ತಂಡಕ್ಕೆ ನೆರವಾಗಿದ್ದರು.
ಇದೀಗ ಸ್ವದೇಶಕ್ಕೆ ವಾಪಸಾಗಿರುವ ಮಾರ್ಷ್ ಮುಂದಿನ ವಾರ ತಜ್ಞ ವೈದ್ಯರನ್ನು ಭೇಟಿಯಾಗಲಿದ್ದಾರೆ.





