ಗೋವಾದಲ್ಲಿ ಕೂಡಲೇ ಬಹುಮತ ಸಾಬೀತುಪಡಿಸಬೇಕು: ಬಿಜೆಪಿಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ಮಾ.13: ಮನೋಹರ್ ಪಾರಿಕ್ಕರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ತಡೆಹೇರಲು ನಿರಾಕರಿಸಿದ ಸುಪ್ರೀಂಕೋರ್ಟ್, ಬಿಜೆಪಿಯು ಗೋವಾ ವಿಧಾನಸಭೆಯಲ್ಲಿ ಕೂಡಲೇ ಬಹುಮತ ಸಾಬೀತು ಪಡಿಸಬೇಕು ಎಂದು ಆದೇಶಿಸಿದೆ.
ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರು ಬಿಜೆಪಿಯ ಮನೋಹರ್ ಪಾರಿಕ್ಕರ್‌ಗೆ ಸರಕಾರ ರಚನೆಗೆ ಆಹ್ವಾನ ನೀಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ.ಎಸ್. ಖೇಹರ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠ ಈ ಆದೇಶ ನೀಡಿದೆ.
ಮಂಗಳವಾರ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ತಡೆ ಹೇರಲು ಸಾಧ್ಯವಿಲ್ಲ. ಆದರೆ, ಬಿಜೆಪಿಯು ಇನ್ನು 48 ಗಂಟೆಯೊಳಗೆ ವಿಧಾನಸಭೆಯಲ್ಲಿ ಕಡ್ಡಾಯವಾಗಿ ಬಹುಮತವನ್ನು ಸಾಬೀತುಪಡಿಸಲೇಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿತು.
ನೀವು ರಾಜ್ಯಪಾಲರ ಬಳಿ ಸರಕಾರ ರಚನೆಗೆ ಏಕೆ ಹಕ್ಕು ಮಂಡಿಸಿಲ್ಲ. ತಮ್ಮ ಪಕ್ಷಕ್ಕೆ ಎಷ್ಟು ಶಾಸಕರ ಬೆಂಬಲವಿದೆ, ಸಂಖ್ಯಾಬಲದ ಬಗ್ಗೆ ಅರ್ಜಿಯಲ್ಲಿ ಯಾಕೆ ಉಲ್ಲೇಖಿಸಿಲ್ಲ. 21 ಸದಸ್ಯರ ಬೆಂಬಲವಿದೆ ಎಂದು ಮನೋಹರ್ ಪಾರಿಕ್ಕರ್ ಅವರ ಹಕ್ಕುಮಂಡನೆಯನ್ನು ತಿರಸ್ಕರಿಸಲು ನಿಮ್ಮ ಬಳಿ ಯಾವುದೇ ಪುರಾವೆಯಿದೆಯೇ? ಎಂದು ಮುಖ್ಯ ನ್ಯಾಯಮೂರ್ತಿ ಕೆಎಸ್ ಖೇಹರ್ ಅವರು ಕಾಂಗ್ರೆಸ್‌ನ್ನು ಪ್ರಶ್ನಿಸಿದರು.
ಕಾಂಗ್ರೆಸ್‌ನ ಪರ ವಕೀಲ ಅಭಿಷೇಕ್ ಸಿಂಘ್ವಿ ಗೋವಾದಲ್ಲಿ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ಕಾಂಗ್ರೆಸ್‌ಗೂ ಬಹುಮತವಿದ್ದು, ನಮಗೆ ಸರಕಾರ ರಚನೆಗೆ ಅವಕಾಶ ನೀಡಬೇಕು ಎಂದು ವಾದ ಮಂಡಿಸಿದರು.







