ಬಂಟ್ವಾಳ: ಎಸ್‌ಡಿಪಿಐ ಪುದು ವಲಯದಿಂದ ಪ್ರತಿಭಟನೆ

ಬಂಟ್ವಾಳ, ಮಾ. 14: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಹಿತ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿಸುವ ಮೂಲಕ ಜನ ವಿರೋಧಿಯಾದ ಕೇಂದ್ರ ಸರಕಾರದ ಮುಖಕ್ಕೆ ತೊಳೆಯಲು ಸಾಧ್ಯವಾಗದಷ್ಟು ಕಪ್ಪು ಮಸಿ ಅಂಟಿಕೊಂಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದ.ಕ. ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಹೇಳಿದರು.
ಕೇಂದ್ರ ಸರಕಾದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಎಸ್‌ಡಿಪಿಐ ಪುದು ವಲಯ ವತಿಯಿಂದ ಮಂಗಳವಾರ ಬೆಳಗ್ಗೆ ಫರಂಗಿಪೇಟೆಯಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಜನಸಾಮಾನ್ಯರಿಗೆ ಅಚ್ಚೇ ದಿನ್, ಕಪ್ಪು ಹಣದ ಆಸೆ ತೋರಿಸಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಂಡವಾಳ ಶಾಹಿಗಳ ಪರ ಹಾಗೂ ಬಡ ಜನರ ವಿರೋಧಿ ನೀತಿಯನ್ನು ತಾಳಿದೆ. ಅಧಿಕಾರದುದ್ದಕ್ಕೂ ಕೈಗಾರಿಕೆ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿ ಕಬಳಿಕೆ, ನೋಟು ನಿಷೇಧ, ಉಪಯುಕ್ತ ವಸ್ತುಗಳ ಬೆಲೆ ಏರಿಕೆ, ಅಷಹಿಷ್ಣುತೆ, ಕೋಮು ಸಂಘರ್ಷವನ್ನೇ ನಡೆಸಿಕೊಂಡು ಬಂದ ಕೇಂದ್ರ ಸರಕಾರ ತನ್ನ ಮುಖಕ್ಕೆ ಅಂಟಿಕೊಂಡಿರುವ ಕಪ್ಪು ಮಸಿಯನ್ನು ಮರೆಮಾಚಲು ಸಂಘಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಮೂಲಕ ನಾಡಿನ ಬುದ್ಧಿಜೀವಿಗಳ ಕೊಲೆ, ಮುಖಕ್ಕೆ ಮಸಿ ಎರಚುವಂತಹ ದುಷ್ಕೃತ್ಯ ಎಸಗುತ್ತಿದೆ ಎಂದು ಅವರು ಆರೋಪಿಸಿದರು.
ಅಡುಗೆ ಅನಿಲದ ಬೆಲೆಯನ್ನು ಏಕಾಏಕಿ ನೂರಾರು ರೂಪಾಯಿ ಏರಿಸುವ ಮೂಲಕ ಕೇಂದ್ರ ಸರಕಾರ ಬಡರಿಗೆ ಗಾಯದ ಮೇಲೆ ಬರೆ ಎಳೆದಿದೆ. ಮಳೆ ಕೊರತೆಯಿಂದ ಇಡೀ ದೇಶ ಬರಕ್ಕೆ ತುತ್ತಾಗಿ ರೈತರು ಸಂಕಷ್ಟದಲ್ಲಿದ್ದರೂ ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರಕಾರಗಳು ಚುನಾವಣಾ ರಾಜಕೀಯದಲ್ಲಿ ಮುಳುಗಿದೆ. ಬರ, ಬೆಲೆ ಏರಿಕೆ, ಅಷಹಿಷ್ಣುತೆಯ ಬಗ್ಗೆ ಚರ್ಚೆಯಾಗದೆ ಉತ್ತರ ರಾಜ್ಯಗಳ ಚುನಾವಣಾ ಫಲಿತಾಂಶದ ಬಗೆಗಿನ ಚರ್ಚೆಯಲ್ಲಿ ಮುಳುಗಿದೆ ಎಂದ ಅವರು, ಕೇಂದ್ರ ಸರಕಾರದ ಜನ ವಿರೋಧಿ ನೀತಿಯ ವಿರುದ್ಧ ಮಾತನಾಡಬೇಕಾದ ರಾಜಕೀಯ ಪಕ್ಷಗಳು ಇಂದು ಮೌನವಾಗಿ ಕುಳಿತಿದೆ ಎಂದು ಕಿಡಿಗಾರಿದರು.
ಪ್ರತಿಭಟನೆಕಾರರು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಪುದು ಗ್ರಾಮ ಪಂಚಾಯತ್ ಸದಸ್ಯ, ಎಸ್‌ಡಿಪಿಐ ಪುದು ವಲಯಾಧ್ಯಕ್ಷ ಸುಲೈಮಾನ್ ಉಸ್ತಾದ್ ವಹಿಸಿದ್ದರು. ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಮಂಚಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಎಸ್‌ಡಿಪಿಐ ಪುದು ವಲಯ ಉಪಾಧ್ಯಕ್ಷ ಅಬ್ದುಲ್ ಅಝೀರ್ ತುಂಬೆ, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್, ವಳಚ್ಚಿಲ್ ಗ್ರಾಮ ಪಂಚಾಯತ್ ಸದಸ್ಯ ಉಬೈದ್ ವಳಚ್ಚಿಲ್, ತುಂಬೆ ಗ್ರಾಮ ಸಮಿತಿ ಅಧ್ಯಕ್ಷ ಇರ್ಫಾನ್ ತುಂಬೆ, ಪುದು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಹತ್ತನೇಮೈಲುಗಲ್ಲು, ಪಿಎಫ್‌ಐ ಫರಂಗಿಪೇಟೆ ಏರಿಯಾ ಅಧ್ಯಕ್ಷ ನಝೀರ್ ಹತ್ತನೇಮೈಲುಗಲ್ಲು, ಪುದು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮುಹಮ್ಮದ್ ಇಕ್ಬಾಲ್, ಮುಖಂಡ ಮುಹಮ್ಮದ್ ವಳಚ್ಚಿಲ್ ಸಹಿತ ಮೊದಲಾದವರು ಉಪಸ್ಥಿತರಿದ್ದರು.
ಖಾದರ್ ಅಮೆಮಾರ್ ಸ್ವಾಗತಿಸಿ ವಂದಿಸಿದರು.







