ಗೋವಾ ವಿಧಾನಸಭೆಯಲ್ಲಿ ಬಹುಮತ ಗೆಲ್ಲುತ್ತೇವೆ: ಬಿಜೆಪಿ ವಿಶ್ವಾಸ
ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್ ಶಾಸಕರು

ಪಣಜಿ,ಮಾ,14: ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪಾರಿಕ್ಕರ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಡೆ ಹೇರಲು ನಿರಾಕರಿಸಿದ ಸುಪ್ರೀಂಕೋರ್ಟಿನ ತೀರ್ಪನ್ನು ಸ್ವಾಗತಿಸಿದ ಬಿಜೆಪಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ವಿಶ್ವಾಸ ವ್ಯಕ್ತಪಡಿಸಿದೆ.
‘‘ನಮ್ಮಂದಿಗೆ ಮಿತ್ರಪಕ್ಷಗಳು ಕೈಜೋಡಿಸಿದ್ದು, 21ಕ್ಕೂ ಅಧಿಕ ಎಂಎಲ್‌ಎಗಳು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಗೋವಾ ಫಾರ್ವರ್ಡ್ ಪಾರ್ಟಿ, ಮಹಾರಾಷ್ಟ್ರವಾಡಿ ಗೋಮಂತಕ್ ಪಾರ್ಟಿ(ಎಂಜಿಪಿ) ಹಾಗೂ ಇಬ್ಬರು ಪಕ್ಷೇತರರು ಪಾರಿಕ್ಕರ್ ನೇತೃತ್ವದ ಸರಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ನಮಗೆ ಸೋಲಾಗುವ ಸಾಧ್ಯತೆಯೇ ಇಲ್ಲ’’ ಎಂದು ಗೋವಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಸದಾನಂದ ತನವಾಡೆ ಸುದ್ದಿಗಾರರಿಗೆ ತಿಳಿಸಿದರು.
‘‘ಇಂದು ಸಂಜೆ 5 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವೆ’’ಎಂದು ಸುಪ್ರೀಂಕೋರ್ಟ್‌ನ ತೀರ್ಪಿನ ಬಗ್ಗೆ ಭಾವಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಪ್ರತಿಕ್ರಿಯಿಸಿದರು.
ಸುಪ್ರೀಂಕೋರ್ಟ್ ತೀರ್ಪು ನಮಗೆ ಲಭಿಸಿದ ಗೆಲುವು
ಇನ್ನು 48 ಗಂಟೆಯೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಬಿಜೆಪಿಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಮ್ಮ ಪಕ್ಷಕ್ಕೆ ಸಂದ ದೊಡ್ಡ ಗೆಲುವು ಎಂದು ಕಾಂಗ್ರೆಸ್ ಧುರೀಣ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್‌ನ 17 ನೂತನ ಶಾಸಕರು ರಾಜ್ಯಪಾಲರಾದ ಮೃದುಲಾ ಸಿನ್ಹಾರನ್ನು ಮಧ್ಯಾಹ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ನಾವು ಮಾ.12 ರಂದು ರಾಜ್ಯಪಾಲರನ್ನು ಭೇಟಿಯಾಗಲು ಬಯಸಿದ್ದೆವು. ಆದರೆ, ಅವರು ರಜಾದಿನ ಎಂಬ ಕಾರಣಕ್ಕೆ ಭೇಟಿಗೆ ಅವಕಾಶ ನಿರಾಕರಿಸಿದ್ದರು ಎಂದು ಕಾಂಗ್ರೆಸ್‌ನ ಹಿರಿಯ ಶಾಸಕರೊಬ್ಬರು ತಿಳಿಸಿದ್ದಾರೆ.







