ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಪಾಕ್‌ನ ಮುಹಮ್ಮದ್ ಇರ್ಫಾನ್ ಅಮಾನತು

ಕರಾಚಿ, ಮಾ.14: ಇತ್ತೀಚೆಗೆ ನಡೆದ ಟ್ವೆಂಟಿ-20 ಲೀಗ್‌ನಲ್ಲಿ ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ವೇಗದ ಬೌಲರ್ ಮುಹಮ್ಮದ್ ಇರ್ಫಾನ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಮಾನತುಗೊಳಿಸಿದೆ.
ಭ್ರಷ್ಟಾಚಾರ ನೀತಿ ಸಂಹಿತೆಯ ಎರಡು ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಅವರ ವಿರುದ್ಧ ಪ್ರಕಣ ದಾಖಲಿಸಲಾಗಿದ್ದು, ಅವರಿಗೆ 14 ದಿನಗಳ ಒಳಗಾಗಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಪಾಕಿಸ್ತಾನ ಸೂಪರ್ ಲೀಗ್‌ನ ಇಸ್ಲಾಮಾಬಾದ್ ಯುನೈಟೆಡ್ ತಂಡದ ಸದಸ್ಯರಾದ ಮುಹಮ್ಮದ್ ಇರ್ಫಾನ್ ಅವರಿಗೆ ಎಲ್ಲ ಮಾದರಿಯ ಕ್ರಿಕೆಟ್‌ಗಳಲ್ಲೂ ಆಡುವುದಕ್ಕೆ ನಿಷೇಧ ಹೇರಲಾಗಿದೆ.
ಪಾಕಿಸ್ತಾನ ಸೂಪರ್ ಲೀಗ್‌ನ ಇಸ್ಲಾಮಾಬಾದ್ ಯುನೈಟೆಡ್ ತಂಡದ ಸದಸ್ಯರಾದ ಶಾರ್ಜಿಲ್ ಖಾನ್ ಮತ್ತು ಖಾಲಿದ್ ಲತೀಫ್ ಅಂತಾರಾಷ್ಟ್ರೀಯ ಬೆಟ್ಟಿಂಗ್ ಜಾಲದ ಸಂಪರ್ಕ ಹೊಂದಿರುವ ವ್ಯಕ್ತಿಯೊಬ್ಬರನ್ನು ಭೇಟಿಯಾದ ಗುಮಾನಿಯ ಮೇರೆಗೆ ಕಳೆದ ತಿಂಗಳು ಅಮಾನತು ಮಾಡಲಾಗಿತ್ತು. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಪಾಕಿಸ್ತಾನ ಕ್ರಿಕೆಟಿಗ ನಾಸಿರ್ ಜಮ್ಶೆದ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಇಂಗ್ಲೆಂಡ್‌ನಲ್ಲಿ ಕಳೆದ ತಿಂಗಳು ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನು ಮೂಲಕ ಹೊರಬಂದಿದ್ದರು. ಜಮ್ಶೆದ್ ಅವರನ್ನು ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಮಾನತು ಮಾಡಿದೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ನಿವೃತ್ತ ಜಡ್ಜ್ ಅಸ್ಗರ್ ಹೈದರ್ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.
34ರ ಹರೆಯದ ಇರ್ಫಾನ್ ಪಿಸಿಬಿಯ ಭ್ರಷ್ಟಾಚಾರ ನಿಗ್ರಹ ಸಮಿತಿಯ ಮುಂದೆ ಹಾಜರಾಗಿ ತನ್ನನ್ನು ಆರು ತಿಂಗಳ ಹಿಂದೆ ಬುಕ್ಕಿಯೊಬ್ಬರು ಸ್ಪಾಟ್ ಫಿಕ್ಸಿಂಗ್ ಉದ್ದೇಶಕ್ಕಾಗಿ ಭೇಟಿಯಾಗಿರುವುರನ್ನು ಒಪ್ಪಿಕೊಂಡಿದ್ದಾರೆ.
ಜನವರಿಯಲ್ಲಿ ತಾಯಿ ಮತ್ತು ಸೆಪ್ಟಂಬರ್‌ನಲ್ಲಿ ತಾಯಿ ತೀರಿ ಹೋಗಿದ್ದ ಕಾರಣದಿಂದಾಗಿ ಈ ಪ್ರಕರಣದ ಬಗ್ಗೆ ಪಿಸಿಬಿಗೆ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ ಎಂದು ಇರ್ಫಾನ್ ತನಿಖಾ ಸಮಿತಿಗೆ ಮಾಹಿತಿ ನೀಡಿದ್ದಾರೆ.
ಇರ್ಫಾನ್ ಅವರನ್ನು ಪಿಎಸ್‌ಎಲ್‌ನ ಒಂದು ಪಂದ್ಯದಿಂದ ಕೈ ಬಿಡಲಾಗಿತ್ತು. ಬಳಿಕ ಎಲ್ಲ ಪಂದ್ಯಗಳಲ್ಲಿ ಆಡಿದ್ದರು.
ಇರ್ಫಾನ್ ಈ ತನಕ 4 ಟೆಸ್ಟ್, 60 ಏಕದಿನ ಮತ್ತು 20 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.







