ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಿವುದು ತುಳು ಆಚರಣೆಗಳ ಮೂಲ ಧ್ಯೇಯ : ರಮೇಶ್ ಉಳಯ

ಪುತ್ತೂರು,ಮಾ.14: ಆರೋಗ್ಯ, ಪ್ರಾಕೃತಿಕ ಸಮತೋಲನ, ನೈತಿಕತೆ ಸೇರಿದಂತೆ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವುದೇ ತುಳು ಆಚರಣೆಗಲ ಮೂಲ ಧ್ಯೇಯ ಎಂದು ರಾಜ್ಯ ತುಳು ಅಕಾಡಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ಉಳಯ ಹೇಳಿದರು.
ಅವರು ಭಾನುವಾರ ಪುತ್ತೂರು ತಾಲೂಕಿನ ಕಾರ್ಜಾಲು ಎಂಬಲ್ಲಿನ ಅತೀ ಪುರಾತನ ದೂಮಾವತಿ ದೈವಸ್ಥಾನದ ದೊಂಪದ ಬಲಿ ನೇಮೋತ್ಸವದಲ್ಲಿ ನಡೆದ 13ನೇ ವರ್ಷದ ಸಾಹಿತ್ಯ ಮತ್ತು ಧರ್ಮ ಸಮ್ಮೇಳನದಲ್ಲಿ ‘ತೌಳವ ಸಂಸ್ಕೃತಿಯ ವಿಶಿಷ್ಟ ಆಚರಣೆಗಳು’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ತುಳುನಾಡಿನಲ್ಲಿ ಪೃಕೃತಿಗೆ ಸಂಬಂಧಿಸಿದ, ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವಂತಹ ಆಚರಣೆಗಳು ಹೆಚ್ಚು ನಡೆಯುತ್ತಿದೆ. ಜನಜೀವನದ ಎಲ್ಲಾ ಸ್ತರಗಳಲ್ಲಿಯೂ ತುಳುನಾಡು ವಿಶಿಷ್ಟವಾಗಿದೆ ಮತ್ತು ಸಂರಕ್ಷಿತವಾಗಿದೆ ಇದಕ್ಕೆಲ್ಲಾ ಇಲ್ಲಿನ ಆಚರಣೆಗಳೇ ಪ್ರಮುಖ ಕಾರಣ ಎಂದರು.
ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಎನ್.ಕೆ. ಜಗನ್ನಿವಾಸ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತುಳು ನಾಡು ಎಂದೇ ಪ್ರಸಿದ್ದವಾಗಿರುವ ನಮ್ಮ ಜಿಲ್ಲೆಯಲ್ಲಿ ತೌಳವ ಸಂಸ್ಕೃತಿ ಬಹಳ ವಿಶಿಷ್ಟ ಎಂಬುದಕ್ಕೆ ಆ ಕಾಲದ ಜನರ ಬದುಕಿನ ನಂಬಿಕೆಗಳೇ ಸಾಕ್ಷಿಯಾಗಿದೆ. ಪ್ರಸ್ತುತ ಇಲ್ಲಿ ಧರ್ಮಪ್ರಜ್ಞೆ ಮತ್ತು ನೈತಿಕ ಪ್ರಜ್ಞೆಯ ಅಗತ್ಯವಿದೆ ಎಂದರು. ರಾಜ್ಯ ತುಳು ಅಕಾಡಮಿಯ ರಿಜಿಸ್ಟ್ರಾರ್ ಬಿ. ಚಂದ್ರಹಾಸ ರೈ, ದೊಂಪದ ಬಲಿ ನೇಮೋತ್ಸವ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ನಗರಸಭೆಯ ಸದಸ್ಯ ಜೀವಂಧರ್ ಜೈನ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂಜೀವ ನಾಯಕ್ ಕಲ್ಲೇಗ, ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಪ್ರೊ. ಬಿ.ಜೆ. ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಬೊಳುವಾರು ಸಾಂಸ್ಕೃತಿಕ ಕೇಂದ್ರ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.







