ಮಾ.16ರಿಂದ ‘ಅನ್ವೇಷಣೆ’ ಚಿತ್ರಕಲಾ ಪ್ರದರ್ಶನ
ಉಡುಪಿ, ಮಾ.14: ಮಂಗಳೂರು ಮಹಾಲಸಾ ಚಿತ್ರಕಲಾ ಶಾಲೆಯ ಆಶ್ರಯದಲ್ಲಿ ‘ಅನ್ವೇಷಣೆ’ ಚಿತ್ರಕಲಾ ಪ್ರದರ್ಶನವನ್ನು ಮಾ.16ರಿಂದ 19ರ ವರೆಗೆ ಉಡುಪಿ ಚಿತ್ರಕಲಾ ಮಂದಿರದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಮಹಾಲಸಾ ಚಿತ್ರಕಲಾ ಶಾಲೆಯ 19 ಕಲಾ ವಿದ್ಯಾರ್ಥಿಗಳು ಜಲವರ್ಣ, ಅಕ್ರಾಲಿಕ್, ತೈಲವರ್ಣ ಮಾಧ್ಯಮದಲ್ಲಿ ರಚಿಸಿದ 32 ಸೃಜನಶೀಲ ವರ್ಣ ಚಿತ್ರಗಳನ್ನು ಇದರಲ್ಲಿ ಪ್ರದರ್ಶಿಸಲಾಗುವುದು ಎಂದು ಮಹಾಲಸಾ ಶಾಲೆಯ ಚಿತ್ರಕಲಾ ವಿಭಾಗದ ಮುಖ್ಯಸ್ಥ ಎನ್.ಎಸ್.ಪತ್ತಾರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
16ರಂದು ಬೆಳಗ್ಗೆ 11ಗಂಟೆಗೆ ಪ್ರದರ್ಶನವನ್ನು ಹಿರಿಯ ಕಲಾವಿದ, ಮಣಿಪಾಲ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಡಾ.ಉನ್ನಿಕೃಷ್ಣನ್ ಉದ್ಘಾಟಿಸಲಿರುವರು. ಉಡುಪಿ ಚಿತ್ರಕಲಾ ಮಂದಿರದ ಕಾರ್ಯದರ್ಶಿ ಡಾ. ಯು.ಸಿ.ನಿರಂಜನ್ ಮುಖ್ಯ ಅತಿಥಿಗಳಾಗಿರುವರು. ಅಧ್ಯಕ್ಷತೆಯನ್ನು ಮಹಾಲಸಾ ಶಾಲೆಯ ಪ್ರಾಚಾರ್ಯ ಪುರುಷೋತ್ತಮ ನಾಯಕ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಡುಪಿ ಚಿತ್ರಕಲಾ ಮಂದಿರದ ಪ್ರಾಚಾರ್ಯ ರಾಜೇಂದ್ರ ತ್ರಾಸಿ, ಮಹಾಲಸಾ ಶಾಲೆಯ ವಿದ್ಯಾರ್ಥಿ ಮುಖಂಡರಾದ ವಿನೋದ್, ಅರುಣ್ ಉಪಸ್ಥಿತರಿದ್ದರು.







