ಮಹಿಳಾ ಹಕ್ಕುಗಳ ಮೇಲೆ ಹೊಸ ದಾಳಿ : ವಿಶ್ವಸಂಸ್ಥೆ ಮಹಾಕಾರ್ಯದರ್ಶಿ

ವಿಶ್ವಸಂಸ್ಥೆ, ಮಾ. 14: ಜಾಗತಿಕವಾಗಿ ಮಹಿಳೆಯರ ಹಕ್ಕುಗಳ ಮೇಲೆ ಹೊಸದಾಗಿ ದಾಳಿಗಳಾಗುತ್ತಿವೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಸೋಮವಾರ ಹೇಳಿದರು.
ಲಿಂಗ ಸಮಾನತೆಗಾಗಿನ ಹೋರಾಟದ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ವಿಶ್ವಸಂಸ್ಥೆಯಲ್ಲಿ ಸೋಮವಾರ ಆರಂಭಗೊಂಡ ಎರಡು ದಿನಗಳ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.
‘‘ಜಾಗತಿಕವಾಗಿ ಮಹಿಳೆಯರ ಸುರಕ್ಷತೆ ಮತ್ತು ಘನತೆಯ ಮೇಲೆ ಹೊಸ ದಾಳಿಗಳು ನಡೆಯುತ್ತಿವೆ’’ ಎಂದು ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಸಮ್ಮೇಳನದ ಆರಂಭಿಕ ಅಧಿವೇಶನದಲ್ಲಿ ಮಾತನಾಡಿದ ಗುಟರಸ್ ಅಭಿಪ್ರಾಯಪಟ್ಟರು.
‘‘ಕೆಲವು ಸರಕಾರಗಳು ಮಹಿಳೆಯರ ಸ್ವಾತಂತ್ರಗಳನ್ನು ಕಡಿತಗೊಳಿಸುವ ಕಾನೂನುಗಳನ್ನು ಜಾರಿಗೊಳಿಸುತ್ತಿವೆ. ಇತರರು ಗೃಹ ಹಿಂಸೆಯ ವಿರುದ್ಧ ನೀಡಲಾಗಿರುವ ಕಾನೂನು ರಕ್ಷಣೆಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿದ್ದಾರೆ’’ ಎಂದರು.
ಗರ್ಭಪಾತ ಸೇವೆಗಳನ್ನು ನೀಡುವ ಸಂಸ್ಥೆಗಳಿಗೆ ಒದಗಿಸಲಾಗುತ್ತಿರುವ ನಿಧಿಗಳನ್ನು ಕಡಿತ ಮಾಡುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಸರಿಸುತ್ತಿರುವ ‘ಜಾಗತಿಕ ಬಾಯ್ಮುಚ್ಚಿಸುವ ನೀತಿ’ ಹಾಗೂ ಗೃಹ ಹಿಂಸೆ ಅಪರಾಧಗಳ ಶಿಕ್ಷೆಗಳನ್ನು ಕಡಿಮೆಗೊಳಿಸಲು ರಶ್ಯ ತೆಗೆದುಕೊಂಡಿರುವ ನಿರ್ಧಾರ- ಈ ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ.
‘‘ಮಹಿಳೆಯರ ಹಕ್ಕುಗಳು ಮಾನವಹಕ್ಕುಗಳು ಹಾಗೂ ಮಹಿಳೆಯರ ಮೇಲಿನ ದಾಳಿಗಳು ನಮ್ಮೆಲ್ಲರ ಮೇಲೆ ನಡೆಯುವ ದಾಳಿಗಳು. ಹಾಗಾಗಿ, ಇಂಥ ವಿಷಯಗಳಲ್ಲಿ ನಾವೆಲ್ಲರೂ ಜೊತೆಯಾಗಿ ಪ್ರತಿಕ್ರಿಯಿಸಬೇಕಾಗಿದೆ’’ ಎಂದರು.
ಟ್ರಂಪ್ ತನ್ನ ಚುನಾವಣಾ ಪ್ರಚಾರದ ಅವಧಿಯಲ್ಲಿ ಗರ್ಭಪಾತಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ, ಗರ್ಭಪಾತ ಕ್ಷೇತದಲ್ಲಿ ಕೆಲಸ ಮಾಡುವ ಸರಕಾರೇತರ ಸಂಘಟನೆಗಳಿಗೆ ಅಮೆರಿಕದ ನೆರವನ್ನು ನಿಲ್ಲಿಸುವ ಆದೇಶವೊಂದಕ್ಕೆ ಸಹಿ ಹಾಕಿದ್ದಾರೆ.
ಇದಾದ ಕೆಲವೇ ವಾರಗಳಲ್ಲಿ, ಗೃಹ ಹಿಂಸೆಯ ಅಪರಾಧಿಗಳ ಜೈಲು ಶಿಕ್ಷೆಯನ್ನು ರದ್ದುಪಡಿಸಿ ದಂಡ ಮಾತ್ರ ವಿಧಿಸುವ ಆದೇಶವೊಂದಕ್ಕೆ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿರುವುದನ್ನು ಸ್ಮರಿಸಬಹುದಾಗಿದೆ.







