ಮುಳುಗುತ್ತಿರುವ ದ್ವೀಪವನ್ನು ರಕ್ಷಿಸಲು ವೈಜ್ಞಾನಿಕ ನೆರವು ಕೋರಿಕೆ : ಪಿಣರಾಯಿ

ತಿರುವನಂತಪುರ,ಮಾ.14: ಸುನಾಮಿ ನಂತರ ಹೆಚ್ಚುತ್ತಿರುವ ಸಮುದ್ರ ಮಟ್ಟ ಮತ್ತು ಕೊರೆತದಿಂದಾಗಿ ಮುಳುಗಡೆಯ ಅಪಾಯವನ್ನು ಎದುರಿಸುತ್ತಿರುವ ಕೊಲ್ಲಂ ಜಿಲ್ಲೆಯಲ್ಲಿನ ‘ಮನ್ರೋ ಥುರಥ್ ’ ದ್ವೀಪದ ಸಂರಕ್ಷಣೆಗಾಗಿ ಸರಕಾರವು ವೈಜ್ಞಾನಿಕ ಪರಿಹಾರಗಳನ್ನು ಕೋರಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು.
ಸರಕಾರವು ದ್ವೀಪದ ರಕ್ಷಣೆಗಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದ ಅವರು, ಅದರ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜೊಂದರ ಪ್ರಕಟಣೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಕೊಲ್ಲಂನಿಂದ ಸುಮಾರು 27 ಕಿ.ಮೀ.ದೂರದಲ್ಲಿ ಅಷ್ಟಮುಡಿ ಸರೋವರ ಮತ್ತು ಕಲ್ಲಡ ನದಿಯ ಹಿನ್ನೀರುಗಳಿಂದ ರೂಪುಗೊಂಡಿರುವ ದ್ವೀಪವನ್ನು ಅಂದಿನ ತಿರುವಾಂಕೂರು ಸಂಸ್ಥಾನದ ಆಡಳಿತಾಧಿಕಾರಿಯಾಗಿದ್ದ ಕರ್ನಲ್ ಜಾನ್ ಮನ್ರೋ ಹೆಸರಿನಿಂದ ಕರೆಯಲಾಗುತ್ತಿದೆ.
2004ರ ಸುನಾಮಿಯಲ್ಲಿ ಮನ್ರೋ ದ್ವೀಪ ವ್ಯಾಪಕ ವಿನಾಶಕ್ಕೆ ಗುರಿಯಾಗಿದ್ದು, ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರಗಳು ಅಪಾರ ಹಾನಿ ಅನುಭವಿಸಿದ್ದವು ಎಂದ ಪಿಣರಾಯಿ, ಹೆಚ್ಚುತ್ತಿರುವ ಸಮುದ್ರ ಮಟ್ಟ ಮತ್ತು ಅಷ್ಟಮುಡಿ ಸರೋವರದಿಂದ ಹರಿದು ಬರುತ್ತಿರುವ ಲವಣಮಿಶ್ರಿತ ನೀರು ಇವು ದ್ವೀಪಕ್ಕೆ ಈಗ ಎದುರಾಗಿರುವ ಅಪಾಯಗಳಾಗಿವೆ. ದ್ವೀಪದಲ್ಲಿಯ ಮನೆಗಳು ಮಾತ್ರವಲ್ಲ,ರಸ್ತೆಗಳೂ ನಾಶಗೊಂಡಿವೆ ಎಂದರು.
ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುವ ಕಾರ್ಯವನ್ನು ಭೂ ವಿಜ್ಞಾನಗಳ ಅಧ್ಯಯನ ಕೇಂದ್ರದಂತಹ ತಾಂತ್ರಿಕ ಸಂಸ್ಥೆಗಳಿಗೆ ಒಪ್ಪಿಸಬೇಕಾಗಿದೆ. ದ್ವೀಪದ ಉಳಿವಿಗಾಗಿ ಇದು ಅಗತ್ಯವಾಗಿದ್ದು, ಸರಕಾರವು ಈ ಬಗ್ಗೆ ಪರಿಶೀಲಿಸುತ್ತಿದೆ ಎಂದರು.
ದ್ವೀಪವು ಕ್ರಮೇಣ ಮುಳುಗಡೆಯಾಗುತ್ತಿರುವುದರಿಂದ ಅಲ್ಲಿಯ ನಿವಾಸಿಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಶಾಸಕ ಕೂವೂರ ಕುಂಞಿಮೋನು ಅವರ ಗಮನ ಸೆಳೆಯುವ ಸೂಚನೆಗೆ ಮುಖ್ಯಮಂತ್ರಿಗಳು ಉತ್ತರಿಸುತ್ತಿದ್ದರು.
ಈ ದ್ವೀಪದಲ್ಲಿ 10,000ಕ್ಕೂ ಅಧಿಕ ಜನರು ವಾಸವಾಗಿದ್ದಾರೆ ಎಂದು ಕುಂಞಿಮೋನು ತಿಳಿಸಿದರು.