5,800 ವಿಮಾನಗಳ ಹಾರಾಟ ರದ್ದು

ನ್ಯೂಯಾರ್ಕ್, ಮಾ. 14: ಹಿಮ ಬಿರುಗಾಳಿ ಧಾವಿಸುತ್ತಿರುವಂತೆಯೇ, ಈಶಾನ್ಯ ಅಮೆರಿಕದ ಹಲವು ಭಾಗಗಳನ್ನು ಮಂಗಳವಾರ ಹಿಮ ಆವರಿಸಿದೆ. ಇದರ ಪರಿಣಾಮವಾಗಿ ಜನರು ಮನೆಗಳಲ್ಲೇ ಉಳಿಯಬೇಕೆಂದು ಸರಕಾರ ಸೂಚಿಸಿತು, ವಿಮಾನಯಾನ ಕಂಪೆನಿಗಳು ವಿಮಾನಗಳ ಹಾರಾಟವನ್ನು ರದ್ದುಪಡಿಸಿದವು ಹಾಗೂ ಶಾಲೆಗಳು ಮುಚ್ಚಿದವು.

ನ್ಯೂಯಾರ್ಕ್, ಪೆನ್ಸಿಲ್ವೇನಿಯ, ನ್ಯೂಜರ್ಸಿ ಮತ್ತು ಕನೆಕ್ಟಿಕಟ್ ರಾಜ್ಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹವಾಮಾನ ಸಂಸ್ಥೆ ಹಿಮ ಬಿರುಗಾಳಿಯ ಮುನ್ನೆಚ್ಚರಿಕೆಗಳನ್ನು ನೀಡಿದೆ. ಬುಧವಾರ ಮುಂಜಾನೆಯ ವೇಳೆಗೆ ಎರಡು ಅಡಿಗಳಷ್ಟು ಹಿಮಪಾತವಾಗಬಹುದು ಹಾಗೂ ಉಷ್ಣತೆಯು ವರ್ಷದ ಈ ಅವಧಿಯ ಸಾಮಾನ್ಯಕ್ಕಿಂತ 15ರಿಂದ 30 ಡಿಗ್ರಿಗಳಷ್ಟು ಕುಸಿಯಬಹುದು ಎಂದು ಅದು ತಿಳಿಸಿದೆ.
ಪೂರ್ವ ಕರಾವಳಿಯ ಸುಮಾರು 5 ಕೋಟಿ ಮಂದಿ ಹಿಮ ಬಿರುಗಾಳಿಯ ಪರಿಣಾಮಕ್ಕೆ ಗುರಿಯಾಗಲಿದ್ದಾರೆ.ವಿಮಾನಯಾನ ಕಂಪೆನಿಗಳು ಅಮೆರಿಕದಾದ್ಯಂತ 5,800ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಪಡಿಸಿವೆ.
ಅಮೆರಿಕದತ್ತ ಮುನ್ನುಗ್ಗುತ್ತಿರುವ ಹಿಮ ಬಿರುಗಾಳಿ: ಟ್ರಂಪ್-ಮರ್ಕೆಲ್ ಭೇಟಿ ಮುಂದಕ್ಕೆ
ವಾಶಿಂಗ್ಟನ್, ಮಾ. 14: ಅಮೆರಿಕದ ಪೂರ್ವ ಕರಾವಳಿಯತ್ತ ಪ್ರಬಲ ಹಿಮ ಬಿರುಗಾಳಿ ಧಾವಿಸುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜರ್ಮನಿ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಭೇಟಿಯನ್ನು ಮಂಗಳವಾರದಿಂದ ಶುಕ್ರವಾರಕ್ಕೆ ಮುಂದೂಡಲಾಗಿದೆ ಎಂದು ಶ್ವೇತಭವನ ತಿಳಿಸಿದೆ.
‘‘ಅಧ್ಯಕ್ಷರು ಜರ್ಮನಿಯ ಚಾನ್ಸಲರ್ ಜೊತೆ ಮಾತನಾಡಿದರು. ಪ್ರತಿಕೂಲ ಹವಾಮಾನದಿಂದಾಗಿ ತಮ್ಮ ಭೇಟಿಯನ್ನು ಮುಂದೂಡಲು ಅವರು ಒಪ್ಪಿದರು. ಈಗ ಭೇಟಿಯನ್ನು ಮಾರ್ಚ್ 17ಕ್ಕೆ ನಿಗದಿಪಡಿಸಲಾಗಿದೆ’’ ಎಂದು ಟ್ರಂಪ್ ವಕ್ತಾರ ಸಿಯಾನ್ ಸ್ಪೈಸರ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.








