ಕುಂದಾಪುರ ತಾಲೂಕು ಆಸ್ಪತ್ರೆ ಅವ್ಯವಸ್ಥೆ ವಿರೋಧಿಸಿ ಪ್ರತಿಭಟನೆ

ಕುಂದಾಪುರ, ಮಾ.14: ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ರೋಗಿ ಗಳಿಗೆ ಚಿಕಿತ್ಸೆ ನಿರಾಕರಣೆ ಹಾಗೂ ಅವ್ಯವಸ್ಥೆಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾರ್ಮಿಕ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಸರ್ವಸಂಘ ಮರಳು ಹೋರಾಟ ಸಮಿತಿಯ ಕಾರ್ಯಕರ್ತರು ಇಂದು ಆಸ್ಪತ್ರೆಗೆ ನುಗ್ಗಿ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ಚಿಕಿತ್ಸೆಗೆಂದು ಬಂದ ವೃದ್ದ ದಂಪತಿಗಳಿಗೆ ಚಿಕಿತ್ಸೆ ನೀಡದೇ ಮಧ್ಯಾಹ್ನ ದವರೆಗೆ ಕಾಯಿಸಿರುವುದಾಗಿ ಆರೋಪಿಸಿ ಸಂಘಟನೆಗಳ ಕಾರ್ಯಕರ್ತರು ಆಸ್ಪತ್ರೆಗೆ ಆಗಮಿಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಕರ್ತವ್ಯ ನಿರ್ವಹಿಸದ ವೈದ್ಯರನ್ನು ಅಮಾನತುಗೊಳಿಸಬೇಕೆಂದು ಅವರು ಆಗ್ರಹಿಸಿದರು.
ಪ್ರತಿಭಟನಕಾರರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸರ್ಜನ್ ಡಾ.ಉದಯ್‌ಶಂಕರ್ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಅವರನ್ನು ಪ್ರತಿ ಭಟನಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಕುಡಿಯುವ ನೀರಿನ ಘಟಕದಲ್ಲಿ ಪಾಚಿ, ಇನ್ನಿತರ ಕಸ ಕಡ್ಡಿಗಳಿದ್ದ ನೀರನ್ನು ಲೋಟದಲ್ಲಿ ತುಂಬಿಸಿ ಸರ್ಜನ್‌ಗೆ ಕುಡಿಯುವಂತೆ ಒತ್ತಾಯಿಸಲಾಯಿತು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಆಸ್ಪತ್ರೆಯಿಂದ ಹೊರಗೆ ಕರೆತಂದರು.
ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಹಾಗೂ ಠಾಣಾಧಿಕಾರಿ ನಾಸೀರ್ ಹುಸೇನ್ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೂ ಆಸ್ಪತ್ರೆಯ ಎದುರಿನ ಬಾಗಿಲಲ್ಲಿ ಕುಳಿತು ಘೋಷಣೆಗಳನ್ನು ಕೂಗಿದರು. ಅವ್ಯವಸ್ಥೆಯನ್ನು ಸರಿಪಡಿಸಿಲು ಒಂದು ವಾರಗಳ ಕಾಲಾವಕಾಶ ನೀಡಿದ ಪ್ರತಿಭಟನಾಕಾರರು, ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಕರಾವೇ ಜಿಲ್ಲಾಧ್ಯಕ್ಷ ಅನ್ಸರ್ ಅಹ್ಮದ್, ಸರ್ವಸಂಘ ಮರಳು ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ, ರಾಘವೇಂದ್ರ, ಚಂದ್ರ ಪೂಜಾರಿ, ಶಾಹಿಲ್, ಸುಹೈಲ್, ಇರ್ಫಾನ್ ಮೊದಲಾದವರು ಉಪಸ್ಥಿತರಿದ್ದರು.







