ಮುಸ್ಲಿಮ್ ನಿಷೇಧ ಆದೇಶಕ್ಕೆ ತಡೆಯಾಜ್ಞೆ ನೀಡಿ : ರಾಜ್ಯಗಳಿಂದ ನ್ಯಾಯಾಲಯಕ್ಕೆ ಮನವಿ

ವಾಶಿಂಗ್ಟನ್, ಮಾ. 14: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಪರಿಷ್ಕೃತ ಮುಸ್ಲಿಮ್ ನಿಷೇಧ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಡೆಮಾಕ್ರಟಿಕ್ ಪಕ್ಷದ ಸರಕಾರಗಳಿರುವ ಅಮೆರಿಕದ ರಾಜ್ಯಗಳು ಫೆಡರಲ್ ನ್ಯಾಯಾಲಯದ ಮೇಲೆ ಒತ್ತಡ ಹೇರಿವೆ. ಸಾಧ್ಯವಾದರೆ, ಗುರುವಾರದಂದು ಜಾರಿಗೆ ಬರುವ ಮೊದಲೇ ಆದೇಶವನ್ನು ಅಮಾನತಿನಲ್ಲಿಡುವಂತೆ ಅವುಗಳು ಕೋರಿವೆ.
ಟ್ರಂಪ್ ರಿಪಬ್ಲಿಕನ್ ಪಕ್ಷದವರಾಗಿದ್ದಾರೆ.ಟ್ರಂಪ್‌ರ ಮೂಲ ಮುಸ್ಲಿಮ್ ನಿಷೇಧ ಆದೇಶಕ್ಕೆ ಫೆಬ್ರವರಿ 3ರಂದು ತಡೆಯಾಜ್ಞೆ ನೀಡಿರುವ ಸಿಯಾಟಲ್ ನ್ಯಾಯಾಧೀಶರ ನ್ಯಾಯಾಲಯದಲ್ಲೇ ವಾಶಿಂಗ್ಟನ್ ರಾಜ್ಯ ಮನವಿ ಸಲ್ಲಿಸಿದೆ.
ಹಳೆಯ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿರುವ ರೀತಿಯಲ್ಲಿ ಪರಿಷ್ಕೃತ ಆದೇಶಕ್ಕೂ ತಡೆಯಾಜ್ಞೆ ಸಿಗುವ ಭರವಸೆಯನ್ನು ವಾಶಿಂಗ್ಟನ್ ರಾಜ್ಯದ ಅಟಾರ್ನಿ ಜನರಲ್ ಬಾಬ್ ಫರ್ಗ್ಯೂಸನ್ ಹೊಂದಿದ್ದಾರೆ.
ನ್ಯಾಯಾಲಯದ ಪರಾಮರ್ಶೆಯಲ್ಲಿ ತೇರ್ಗಡೆಯಾಗುವ ರೀತಿಯಲ್ಲಿ ಟ್ರಂಪ್ ಆಡಳಿತವು ಮೂಲ ನಿಷೇಧ ಆದೇಶಕ್ಕೆ ಮಾರ್ಪಾಡುಗಳನ್ನು ತಂದಿದೆ.
ನೂತನ ಆದೇಶದ ಪ್ರಕಾರ, ನಿರಾಶ್ರಿತರಿಗೆ ಆಶ್ರಯ ನೀಡುವ ಕಾರ್ಯಕ್ರಮವನ್ನು 120 ದಿನಗಳ ಕಾಲ ತಡೆಹಿಡಿಯಲಾಗುವುದು ಹಾಗೂ ಇರಾನ್, ಲಿಬಿಯ, ಸೊಮಾಲಿಯ, ಸುಡಾನ್, ಸಿರಿಯ ಮತ್ತು ಯಮನ್‌ಗಳ ನಿವಾಸಿಗಳಿಗೆ 90 ದಿನಗಳ ಕಾಲ ಅಮೆರಿಕ ವೀಸಾಗಳನ್ನು ವಿತರಿಸಲಾಗುವುದಿಲ್ಲ.
ವಾಶಿಂಗ್ಟನ್ ಸಲ್ಲಿಸಿದ ಮೊಕದ್ದಮೆಯಲ್ಲಿ ತಾನೂ ಸೇರಿಕೊಳ್ಳುವುದಾಗಿ ಕ್ಯಾಲಿಫೋರ್ನಿಯ ರಾಜ್ಯ ಹೇಳಿದೆ. ಮೇರಿಲ್ಯಾಂಡ್, ಮ್ಯಾಸಚುಸೆಟ್ಸ್, ಮಿನಸೋಟ, ನ್ಯೂಯಾರ್ಕ್ ಮತ್ತು ಒರೆಗಾನ್ ರಾಜ್ಯಗಳೂ ಮೊಕದ್ದಮೆಗೆ ಬೆಂಬಲ ನೀಡಿವೆ.







