ನನ್ನ ನಿಲುವಿನಲ್ಲಿ ಬದಲಾವಣೆಯಿಲ್ಲ: ಜಯಪ್ರಕಾಶ್ ಹೆಗ್ಡೆ

ಉಡುಪಿ, ಮಾ.14: ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ನನ್ನ ನಡೆಗಳನ್ನು ನೋಡಿ ಇದನ್ನು ತೀರ್ಮಾನಿಸಬಹುದು. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಪ್ರವೃತ್ತಿ ನನ್ನಲ್ಲಿ ಎಂದಿನಿಂದಲೂ ಇದೆ. 2018ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ಬಿಜೆಪಿ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಕಳೆದ ಮಾ.8ರಂದು ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಜೆಡಿಎಸ್, ಕಾಂಗ್ರೆಸ್ ನಾಯಕರಾದ ಜಯಪ್ರಕಾಶ್ ಹೆಗ್ಡೆ ಇಂದು ಮೊದಲ ಬಾರಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದಾಗ ಏರ್ಪಡಿಸಿದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಜಿಲ್ಲಾದ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನೇತೃತ್ವದಲ್ಲಿ ಜಿಲ್ಲಾ ಸಮಿತಿಯ ಸದಸ್ಯರು ಹೆಗ್ಡೆ ಅವರನ್ನು ಸ್ವಾಗತಿಸಿದರು. ನಾನು ಹಿಂದಿನ ದಿನಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಪಕ್ಷದ ಗೆಲುವಿಗೆ ದುಡಿಯಲು ಮುಂದಾಗಬೇಕು ಎಂದರು.
ಮಾ.25ರಂದು ಜಿಲ್ಲಾ ಬಿಜೆಪಿ ಚಿತ್ತರಂಜನ್ ಸರ್ಕಲ್‌ನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಹೆಗ್ಡೆ ಅವರ ಅನುಯಾಯಿಗಳು, ಬೆಂಬಲಿಗರು, ಬಿಜೆಪಿ ಬಿಟ್ಟು ಹೊರಹೋಗಿ ಮತ್ತೆ ಸೇರಲು ಬಯಸುವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ. ರಾಜ್ಯ ನಾಯಕರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜೆಡಿಎಸ್‌ನಲ್ಲಿ ತನ್ನ ಸಹಯೋಗಿಯಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರನ್ನು ಬಿಜೆಪಿಗೆ ಸ್ವಾಗತಿಸುತ್ತಾ ನುಡಿದರು.
ಸಮಾರಂಭದಲ್ಲಿ ಬಿಜೆಪಿ ನಾಯಕರಾದ ದಿನಕರಬಾಬು, ಉದಯಕುಮಾರ್ ಶೆಟ್ಟಿ, ಯಶ್ಪಾಲ್ ಸುವರ್ಣ, ಶೀಲಾ ಕೆ.ಶೆಟ್ಟಿ, ಕುಂದಾಪುರ ಕ್ಷೇತ್ರ ಅದ್ಯಕ್ಷ ಸುರೇಶ್ ಶೆಟ್ಟಿ ಕಾಡೂರು ಉಪಸ್ಥಿತರಿದ್ದರು. ಪ್ರದಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.







