117 ಶಾಸಕರಿರುವ ಪಂಜಾಬ್ ನಲ್ಲಿ ಗೆದ್ದ ಮುಸ್ಲಿಂ ಶಾಸಕರ ಸಂಖ್ಯೆ ಎಷ್ಟು ಗೊತ್ತೇ ?

ಮಲೇರ್‌ಕೋಟಲಾ,ಮಾ.14: ಹಿರಿಯ ಪೊಲೀಸ್ ಅಧಿಕಾರಿಯ ಪತ್ನಿ ಹಾಗೂ ಮೂರನೇ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ರಝಿಯಾ ಸುಲ್ತಾನಾ ಅವರು 117 ಸದಸ್ಯಬಲದ ಪಂಜಾಬ್ ವಿಧಾನಸಭೆಯಲ್ಲಿ ಏಕೈಕ ಮುಸ್ಲಿಂ ಸದಸ್ಯೆಯಾಗಿದ್ದಾರೆ.
ಕಾಂಗ್ರೆಸ್ ರಾಜ್ಯದಲ್ಲಿ ಸರಕಾರ ರಚನೆಗೆ ಸಜ್ಜಾಗಿದ್ದು, ಪಕ್ಷದ ಅತ್ಯಂತ ಹಿರಿಯ ಸದಸ್ಯರಲ್ಲೊಬ್ಬರಾಗಿರುವ ರಝಿಯಾ ಸಚಿವ ಪದವಿಯ ಮೇಲೆ ಕಣ್ಣಿಟ್ಟಿದ್ದಾರೆ.
2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಲೇರ್‌ಕೋಟಲಾ ಕ್ಷೇತ್ರದಲ್ಲಿ ರಝಿಯಾ ತನ್ನ ನಿಕಟ ಪ್ರತಿಸ್ಪರ್ಧಿ ಅಕಾಲಿ ದಳದ ಮುಹಮ್ಮದ್ ಉವೈಸ್ ಅವರನ್ನು 12,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ. ಆಪ್ ಕಣಕ್ಕಳಿಸಿದ್ದ ಏಕೈಕ ಮುಸ್ಲಿಂ ಅಭ್ಯರ್ಥಿ ಮುಹಮ್ಮದ್ ಅರ್ಷದ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ರಝಿಯಾ ಐದು ಶೌರ್ಯ ಪ್ರಶಸ್ತಿಗಳನ್ನು ಪಡೆದಿರುವ ಪಂಜಾಬ್ ಡಿಜಿಪಿ ಮುಹಮ್ಮದ್ ಮುಸ್ತಫಾ ಅವರ ಪತ್ನಿಯಾಗಿದ್ದಾರೆ.2002 ಮತ್ತು 2007ರಲ್ಲಿ ಮಲೇರ್‌ಕೋಟಲಾ ಕ್ಷೇತ್ರದಿಂದ ಗೆದ್ದಿದ್ದ ರಝಿಯಾ 2012ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.
1957ರಿಂದ ಮಲೇರ್‌ಕೋಟಲಾ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಾಗಿ ಮುಸ್ಲಿಂ ಅಭ್ಯರ್ಥಿಗಳೇ ಗೆಲ್ಲುತ್ತಿದ್ದಾರೆ.2012ರಲ್ಲಿ ಪಂಜಾಬ್ ವಿಧಾನಸಭೆಯಲ್ಲಿ ಅಕಾಲಿ ದಳದ ಎಫ್.ನಿಸಾರಾ ಖಾತೂನ್ ಸೇರಿದಂತೆ ಇಬ್ಬರು ಮುಸ್ಲಿಂ ಶಾಸಕರಿದ್ದರು.
2017ರ ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಬರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಆಪ್ ಮತ್ತು ಅಕಾಲಿ ದಳ ತಲಾ ಓರ್ವರಿಗೆ ಟಿಕೆಟ್ ನೀಡಿದ್ದವು. ಬಿಜೆಪಿ ಯಾವುದೇ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿರಲಿಲ್ಲ.