ಪರೀಕ್ಷೆಗಳಲ್ಲಿ ಉತ್ತೀರ್ಣಗೊಳ್ಳಲು ಪೆನ್ ನೀಡುವ ದೇವಸ್ಥಾನ : ವಿದ್ಯಾರ್ಥಿ ಅನುತ್ತೀರ್ಣನಾದರೆ ಪೂರ್ಣ ಹಣ ವಾಪಸ್ !
ಮಂಡಳಿ ಪರೀಕ್ಷೆಗಳಲ್ಲಿ ದೈವೀ ಚಮತ್ಕಾರ?

ಅಹ್ಮದಾಬಾದ್,ಮಾ.14: 10 ಮತ್ತು 12ನೇ ತರಗತಿಗಳಲ್ಲಿ ಒದ್ದಾಡುತ್ತಿರುವ ವಿದ್ಯಾರ್ಥಿಗಳಿಗೆ ನೆಮ್ಮದಿಯ ಸುದ್ದಿಯೊಂದು ಇಲ್ಲಿದೆ. ಗುಜರಾತಿನ ದೇವಸ್ಥಾನವೊಂದು ಮಂಡಳಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿರುವ ವಿದ್ಯಾರ್ಥಿಗಳ ನೆರವಿಗೆ ಬಂದಿದೆ.
ಮೋಜಿನ ವಿಷಯವೆಂದರೆ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಪಾಲಿಗೆ ಜೀವನದಲ್ಲಿಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಪೆನ್ ಸೆಟ್‌ನ್ನು ಈ ದೇವಸ್ಥಾನವು ನೀಡುತ್ತದೆ. ವಿದ್ಯಾರ್ಥಿಗಳ ಹರಕೆಗೆ ಗ್ಯಾರಂಟಿಯನ್ನೂ ನೀಡುವ ಈ ದೇವಸ್ಥಾನವು ಅನುತ್ತೀರ್ಣಗೊಂಡರೆ ಪೆನ್‌ಸೆಟ್‌ಗೆ ನೀಡಿದ ಪೂರ್ಣ ಹಣವನ್ನು ಮರಳಿಸುವ ಭರವಸೆಯನ್ನು ನೀಡುತ್ತದೆ. ಅಂದ ಹಾಗೆ ಈ ಪೆನ್ ಸೆಟ್‌ನ ಬೆಲೆ ಕೇವಲ 1900 ರೂ.ಗಳು !
ರಾಜ್ಯದ ಪಂಚಮಹಲ್ ಜಿಲ್ಲೆಯ ಕಾಷ್ಠಭಂಜನ ದೇವಸ್ಥಾನದ,ಅಷ್ಟೇನೂ ಸುಂದರ ವಿನ್ಯಾಸವಿರದ ಕರಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಹಲವರು ಹುಬ್ಬೇರಿಸಿದ್ದಾರೆ, ಜೊತೆಗೆ ಅಣಕವಾಡುವ ಪ್ರತಿಕ್ರಿಯೆಗಳೂ ಧಾರಾಳವಾಗಿ ಹರಿದುಬಂದಿವೆ.
ಹನುಮಾನ ಸೇವಕನೆಂದು ತನ್ನನ್ನು ಗುರುತಿಸಿಕೊಂಡಿರುವ ದುಷ್ಯಂತ ಬಾಪೂಜಿ ಎಂಬ ವ್ಯಕ್ತಿ ಹನುಮಾನ ಸರಸ್ವತಿ ಯಜ್ಞದ ಮೂಲಕ ಸಾಕ್ಷಾತ್ಕರಿಸಲಾದ ದೈವೀಶಕ್ತಿಯನ್ನು ಬಳಸಿ ಈ ಪೆನ್‌ಗಳನ್ನು ತಯಾರಿಸಲಾಗಿದೆ ಎಂದು ಕರಪತ್ರದಲ್ಲಿ ಹೇಳಿಕೊಂಡಿದ್ದಾನೆ.
ನಿಮ್ಮ ಮಗು ಪರೀಕ್ಷೆಯಲ್ಲಿ ಪಾಸಾಗಬೇಕೆಂದು ನೀವು ಬಯಸಿದ್ದೀರಾ, ನಿಮ್ಮ ಮಗು ಅನುತ್ತೀರ್ಣಗೊಳ್ಳುವ ಭಯವಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿರುವ ಕರಪತ್ರವು ಪೋಷಕರ ಭಾವನೆಗಳನ್ನು ಬಂಡವಾಳವಾಗಿಸಿಕೊಳ್ಳಲು ಪ್ರಯತ್ನಿಸಿದೆ.
ಅಂದ ಹಾಗೆ ಈ ಪೆನ್ ತಪ್ಪುಕೈಗಳನ್ನು ಸೇರಕೂಡದು ಎಂಬ ಕಾಳಜಿಯಿಂದ ಅದನ್ನು ಪಡೆಯಲು ಮೊಬೈಲ್ ನಂ.,ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳು, ಶಾಲೆ/ಕಾಲೇಜಿನ ಗುರುತು ಚೀಟಿ ಇತ್ಯಾದಿಗಳನ್ನು ಕಡ್ಡಾಯಗೊಳಿಸಲಾಗಿದೆ!