ಡಬಲ್ ಒಲಿಂಪಿಕ್ಸ್ ಚಾಂಪಿಯನ್ ಜೊವಾನ್ನಾ ರೌಸೆಲ್ ನಿವೃತ್ತಿ
ಲಂಡನ್, ಮಾ.14: ಬ್ರಿಟನ್‌ನ ಡಬಲ್ ಒಲಿಂಪಿಕ್ಸ್ ಚಾಂಪಿಯನ್ ಜೊವಾನ್ನಾ ರೌಸೆಲ್-ಶಂದ್ ಅಂತಾರಾಷ್ಟ್ರೀಯ ಸೈಕ್ಲಿಂಗ್‌ನಿಂದ ನಿವೃತ್ತಿಯಾಗಿದ್ದಾರೆ.
28ರ ಹರೆಯದ 2012ರ ಲಂಡನ್ ಒಲಿಂಪಿಕ್ಸ್ ಹಾಗೂ ಕಳೆದ ವರ್ಷ ನಡೆದಿದ್ದ ರಿಯೋ ಒಲಿಂಪಿಕ್ಸ್‌ನಲ್ಲಿ ತಂಡ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು.
‘‘ಕಳೆದ 10 ವರ್ಷಗಳ ಕಾಲ ಬ್ರಿಟನ್‌ನ ಸೈಕ್ಲಿಂಗ್ ತಂಡದ ಭಾಗವಾಗಿದ್ದೆ. ವಿಶ್ವದೆಲ್ಲೆಡೆ ರೇಸಿಂಗ್‌ನಲ್ಲಿ ಭಾಗವಹಿಸಿದ್ದೆ. ಇಂದು ನಾನು ಅಂತಾರಾಷ್ಟ್ರೀಯ ರೇಸಿಂಗ್ ಸ್ಪರ್ಧೆಯಿಂದ ನಿವೃತ್ತಿಯಾಗುತ್ತಿದ್ದೇನೆ. ನಿವೃತ್ತಿಯ ನಿರ್ಧಾರ ಅತ್ಯಂತ ಕಠಿಣವಾಗಿದೆ’’ ಎಂದು ರೌಸೆಲ್-ಶಂದ್ ತಮ್ಮ ವೆಬ್‌ಸೈಟ್‌ನಲ್ಲಿ ನೀಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
10 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ರೌಸೆಲ್-ಶಂದ್ ಐದು ಬಾರಿ ವಿಶ್ವ ಚಾಂಪಿಯನ್ ಹಾಗೂ ನಾಲ್ಕು ಬಾರಿ ಯುರೋಪಿಯನ್ ಚಾಂಪಿಯನ್ ಆಗಿದ್ದರು. ನಾಲ್ಕು ಬಾರಿ ತಂಡ ವಿಭಾಗದಲ್ಲಿ ಹಾಗೂ ಒಂದು ಬಾರಿ ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಕಿರೀಟ ಧರಿಸಿದ್ದರು. 2014ರಲ್ಲಿ ಕಾಮನ್‌ವೆಲ್ತ್ ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು.







