ಮುಲ್ಕಿ: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆ ಶಂಕೆ
.jpg)
ಮುಲ್ಕಿ, ಮಾ.14: ಇಲ್ಲಿಗೆ ಸಮೀಪದ ಕೆ.ಎಸ್. ರಾವ್ ನಗರದ ಸರಕಾರಿ ವಿದ್ಯಾರ್ಥಿನಿಲಯದ ಬಳಿಯ ಮನೆಯಲ್ಲಿ ಕೊಳೆತ ರೀತಿಯಲ್ಲಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಹಳೆಯಂಗಡಿ ಲೈಟ್‌ಹೌಸ್ ಬಳಿಯ ನಿವಾಸಿ ಹರೀಶ್ ಪೂಜಾರಿ(43) ಎಂದು ಗುರುತಿಸಲಾಗಿದೆ.
ಕೆ.ಎಸ್. ರಾವ್ ನಗರದ ಕೆಲ ಯುವಕರು ಸಂಜೆ ಹೊತ್ತಿಗೆ ಮನೆಮನೆಗೆ ಆಮಂತ್ರಣ ಪತ್ರ ವಿತರಿಸುತ್ತ ಸರಕಾರಿ ವಿದ್ಯಾರ್ಥಿ ನಿಲಯದ ಬಳಿಯ ಲಲಿತ ಎಂಬವರ ಮನೆ ಆವರಣ ಪ್ರವೇಶಿಸುತ್ತಿದ್ದಂತೆ ವಿಪರೀತ ವಾಸನೆ ಬರಲಾರಂಬಿಸಿತು. ಕೂಡಲೇ ಯುವಕರು ಜಾಗೃತರಾಗಿ ಮನೆಯ ಒಳಗೆ ಹೋಗಿ ನೋಡಿದಾಗ ಅನಾಥ ಶವ ಬಿದ್ದಿದ್ದು ಮನೆಯ ಎದುರಿನಲ್ಲಿ ಏನೂ ಗೊತ್ತಾಗದ ರೀತಿಯಲ್ಲಿ ಲಲಿತಾ ಕುಳಿತಿದ್ದರು ಎನ್ನಲಾಗಿದೆ.
ಲಲಿತಾ ಮಾನಸಿಕ ಅಸ್ವಸ್ಥೆಯಾಗಿದ್ದು ಸ್ಥಳೀಯ ಯಾರ ಜೊತೆಯೂ ಬೆರೆಯುತ್ತಿರಲಿಲ್ಲ.ಮೃತ ವ್ಯಕ್ತಿ ಹರೀಶ್ ಲಲಿತಾ ಅವರ ಅಕ್ಕನ ಮಗನಾಗಿದ್ದು ಕೂಲಿ ಕೆಲಸ ಮಾಡುತ್ತಿದ್ದ. ಈತ ಹಳೆಯಂಗಡಿಯಲ್ಲಿ ನೆಲೆಸಿದ್ದು ಆಗಾಗ್ಗೆ ಕೆ.ಎಸ್.ರಾವ್ ನಗರದ ಅಕ್ಕನ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.
ಮಾನಸಿಕ ಅಸ್ವಸ್ಥೆಯಾಗಿರುವ ಲತಾ ಹೇಳುವ ಪ್ರಕಾರ ಕಳೆ ಮಾ.9ರಂದು ಕೆಎಸ್‌ರಾವ್ ನಗರದಲ್ಲಿ ಕೋಲ ಇದ್ದು ಆ ದಿನ ವಿಪರೀತ ಮದ್ಯ ಸೇವಿಸಿ ಮನೆಗೆ ಬಂದು ಮಲಗಿದ್ದವನು ಏಳಲಿಲ್ಲ ಎನ್ನುತ್ತಾರೆ. ಹರೀಶ ಮೃತನಾಗಿ 5 ದಿನಗಳಾದರೂ ಯಾರಿಗೂ ಹೇಳದೆ ಮಹಿಳೆ ಲಲಿತಾ ಮನೆಯ ಎದುರಲ್ಲೇ ಕುಳಿತಿದ್ದರು. ಮೃತ ಹರೀಶನ ಮೈಮೇಲೆ ಕತ್ತಿಯಿಂದ ಕಡಿದ ಗಾಯಗಳಿದ್ದು ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಹರೀಶನಿಗೆ ಮದುವೆಯಾಗಿದ್ದು ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಎಂದ ತಿಳಿಸಿರುವ ಸ್ಥಳೀಯರು ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಮಡಿದ್ದಾರೆ.







