ಹೆರಾತ್‌ಗೆ ಸನ್ಮಾನಿಸಲು ತಮಿಳು ಯೂನಿಯನ್ ಕ್ರಿಕೆಟ್ ಸಿದ್ಧತೆ

ಕೊಲಂಬೊ,ಮಾ.14: ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಗರಿಷ್ಠ ವಿಕೆಟ್ ಪಡೆದ ಮೊದಲ ಎಡಗೈ ಸ್ಪಿನ್ನರ್ ಎನಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ ನಿರ್ಮಿಸಿರುವ ಶ್ರೀಲಂಕಾದ ಹಂಗಾಮಿ ಟೆಸ್ಟ್ ನಾಯಕ ರಂಗನ ಹೆರಾತ್‌ಗೆ ತಮಿಳು ಯೂನಿಯನ್ ಕ್ರಿಕೆಟ್ ಹಾಗೂ ಅಥ್ಲೆಟಿಕ್ಸ್ ಕ್ಲಬ್ ಬುಧವಾರ ಸನ್ಮಾನಿಸಲು ನಿರ್ಧರಿಸಿದೆ.
ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್ ಆರಂಭಕ್ಕೆ ಮೊದಲು ಹೆರಾತ್‌ಗೆ ಸನ್ಮಾನಿಸಲು ನಿರ್ಧರಿಸಲಾಗಿದೆ.
ಶ್ರೀಲಂಕಾದ ದೇಶೀಯ ಕ್ರಿಕೆಟ್‌ನಲ್ಲಿ ಹೆರಾತ್ ತಮಿಳು ಯೂನಿಯನ್‌ನ್ನು ಪ್ರತಿನಿಧಿಸುತ್ತಿದ್ದಾರೆ. ತವರು ಮೈದಾನ ಪಿ.ಸಾರಾ ಓವಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಎರಡನೆ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದ್ದಾರೆ.
‘‘ತಮಿಳು ಯೂನಿಯನ್‌ನ ಆಟಗಾರ ಹೆರಾತ್ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕತ್ವವಹಿಸಿಕೊಂಡಿರುವುದಕ್ಕೆ ನಮಗೆ ತುಂಬಾ ಸಂತೋಷವಾಗುತ್ತಿದೆ. ಕಳೆದ ಶನಿವಾರ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ವಿಕೆಟ್ ಪಡೆದ ವಿಶ್ವದ ಮೊದಲ ಎಡಗೈ ಸ್ಪಿನ್ನರ್ ಎನಿಸಿಕೊಂಡಿದ್ದರು. ಬುಧವಾರ ಎರಡನೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಪ್ರಕ್ರಿಯೆ ಕೊನೆಗೊಂಡ ತಕ್ಷಣ ಹೆರಾತ್‌ಗೆ ಸನ್ಮಾನಿಸಲಾಗುವುದು. ಈ ಸರಳ ಕಾರ್ಯಕ್ರಮಕ್ಕೆ ಹೆರಾತ್ ಕುಟುಂಬ ಸದಸ್ಯರನ್ನು ಆಹ್ವಾನಿಸಿದ್ದೇವೆ’’ ಎಂದು ತಮಿಳು ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ನರೇಶ್‌ಕುಮಾರ್ ಜಯಲಿಂಗಂ ತಿಳಿಸಿದ್ದಾರೆ.
ಈ ಹಿಂದೆ 2011-12ರಲ್ಲಿ ತಮಿಳು ಮೂಲದ ತಿಲಕರತ್ನೆ ದಿಲ್ಶನ್ ಶ್ರೀಲಂಕಾ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.
ಹೆರಾತ್ ಶನಿವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಿವೀಸ್‌ನ ಡೇನಿಯಲ್ ವೆಟೋರಿ(113 ಟೆಸ್ಟ್, 362 ವಿಕೆಟ್) ದಾಖಲೆಯನ್ನು ಮುರಿದು ಗರಿಷ್ಠ ವಿಕೆಟ್ ಕಬಳಿಸಿದ ವಿಶ್ವದ ಮೊದಲ ಎಡಗೈ ಸ್ಪಿನ್ನರ್ ಎನಿಸಿಕೊಂಡಿದ್ದರು. ವಿಶ್ವಶ್ರೇಷ್ಠ ಬೌಲರ್ ಮುತ್ತಯ್ಯ ಮುರಳೀಧರನ್ ಕೂಡ 21 ವರ್ಷಗಳ ಕಾಲ ತಮಿಳು ಯೂನಿಯನ್ ತಂಡವನ್ನು ಪ್ರತಿನಿಧಿಸುತ್ತಿದ್ದರು.







