ಲಕ್ಷ್ಮಣ್ -ದ್ರಾವಿಡ್ ದಾಖಲೆಯ ಜೊತೆಯಾಟಕ್ಕೆ 16 ವರ್ಷ
ಗಂಗುಲಿ ಬಳಗಕ್ಕೆ 171 ರನ್ ಜಯ * ಹರ್ಭಜನ್‌ಗೆ 13 ವಿಕೆಟ್

ಕೋಲ್ಕತಾ, ಮಾ.14: ಕೋಲ್ಕತಾದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತದ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಐತಿಹಾಸಿಕ ಜೊತೆಯಾಟಕ್ಕೆ 16 ವರ್ಷ ಸಂದಿವೆ.
2001ರಲ್ಲಿ ಮಾ.11ರಿಂದ 15ರ ತನಕ ನಡೆದ ಆಸ್ಟ್ರೇಲಿಯ ವಿರುದ್ಧದ 2ನೇ ಟೆಸ್ಟ್‌ನ ನಾಲ್ಕನೆ ದಿನ(ಮಾ.14ರಂದು) ರಾಹುಲ್- ಲಕ್ಷ್ಮಣ್ ಐದನೆ ವಿಕೆಟ್‌ಗೆ 376 ರನ್‌ಗಳ ಜೊತೆಯಾಟ ನೀಡಿ ಭಾರತಕ್ಕೆ 171 ರನ್‌ಗಳ ಭರ್ಜರಿ ಗೆಲುವಿಗೆ ನೆರವಾಗಿದ್ದರು.
ಆಸ್ಟ್ರೇಲಿಯ ವಿರುದ್ಧ 3-0ಮತ್ತು ನ್ಯೂಝಿಲೆಂಡ್ ವಿರುದ್ಧ 2-0 ಅಂತರದಲ್ಲಿ ಸೋಲು ಅನುಭವಿಸಿ ತವರಿಗೆ ಮರಳಿದ್ದ ಭಾರತ ಮೊದಲ ಟೆಸ್ಟ್‌ನಲ್ಲಿ 10 ವಿಕೆಟ್‌ಗಳ ಸೋಲು ಅನುಭವಿಸಿತ್ತು.
ಎರಡನೆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ನಾಯಕ ಸ್ಟೀವ್ ವಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ ನಾಯಕ ಸ್ಟೀವ್ ವಾ (110) ಮತ್ತು ಮ್ಯಾಥ್ಯೂ ಹೇಡನ್(97) ಬ್ಯಾಟಿಂಗ್ ನೆರವಿನಲ್ಲಿ 131.5 ಓವರ್‌ಗಳಲ್ಲಿ 445 ರನ್ ಗಳಿಸಿತ್ತು. ಹರ್ಭಜನ್ ಸಿಂಗ್(123ಕ್ಕೆ 7) ಪ್ರಬಲ ಪ್ರಹಾರ ನೀಡಿದ್ದರೂ ಆಸ್ಟ್ರೇಲಿಯದ ಸ್ಕೋರ್ 440ರ ಗಡಿ ದಾಟಿತ್ತು.
ಭಾರತ ಮೊದಲ ಇನಿಂಗ್ಸ್‌ನಲ್ಲಿ 58.1 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟಾಗಿ 274 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಲಕ್ಷ್ಮಣ್ (59) ತಂಡದ ಪರ ಗರಿಷ್ಠ ಸ್ಕೋರ್ ಆಗಿತ್ತು. ಫಾಲೋ ಆನ್ ಅನುಭವಿಸಿದ ಭಾರತ ಎರಡನೆ ಇನಿಂಗ್ಸ್‌ನಲ್ಲಿ ಭಾರತ 115ಕ್ಕೆ 3ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ನಾಯಕ ಸೌರವ್ ಗಂಗುಲಿ ಮತ್ತು ವಿವಿಎಸ್ ಲಕ್ಷ್ಮಣ್ ನಾಲ್ಕನೆ ವಿಕೆಟ್‌ಗೆ 117 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 232ಕ್ಕೆ ಏರಿಸಿದರು. ಗಂಗುಲಿ 48 ರನ್ ಗಳಿಸಿ ಔಟಾದರು. ಐದನೆ ವಿಕೆಟ್‌ಗೆ ಲಕ್ಷ್ಮಣ್‌ಗೆ ರಾಹುಲ್ ದ್ರಾವಿಡ್ ಜೊತೆಯಾದರು. ಮಾ.13ರಂದು ಮೂರನೆ ದಿನದಾಟದಂತ್ಯಕ್ಕೆ ಲಕ್ಷ್ಮಣ್ ಔಟಾಗದೆ 109 ಮತ್ತು ರಾಹುಲ್ ದ್ರಾವಿಡ್ 7 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಮಾ.14ರಂದು ನಾಲ್ಕನೆ ದಿನ ದ್ರಾವಿಡ್ ಮತ್ತು ಲಕ್ಷ್ಮಣ್ ದಿನ ಪೂರ್ತಿ ಬ್ಯಾಟಿಂಗ್ ನಡೆಸಿದರು. ಆಟ ಕೊನೆಗೊಂಡಾಗ ಲಕ್ಷ್ಮಣ್ 275 ಮತ್ತು ದ್ರಾವಿಡ್ 155 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಭಾರತ 165 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 589 ರನ್ ಗಳಿಸಿತ್ತು.
ಅಂತಿಮ ದಿನ ಲಕ್ಷ್ಮಣ್ 281 ರನ್ ಗಳಿಸಿ ಔಟಾದರು. ದ್ರಾವಿಡ್ 180 ರನ್ ಗಳಿಸಿ ರನೌಟಾದರು. ಭಾರತ ಊಟದ ವಿರಾಮದ ಸ್ವಲ್ಪ ಮೊದಲು 178 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 657 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಗೆಲುವಿಗೆ 384 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ ಊಟದ ವಿರಾಮದ ವೇಳೆಗೆ 12 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿತ್ತು. ಹರ್ಭಜನ್ ಸಿಂಗ್(73ಕ್ಕೆ 6), ಸಚಿನ್ ತೆಂಡುಲ್ಕರ್(31ಕ್ಕೆ 3) ಮತ್ತು ರಾಜು (58ಕ್ಕೆ 1) ದಾಳಿಗೆ ಸಿಲುಕಿದ ಆಸ್ಟ್ರೇಲಿಯ 272 ನಿಮಿಷಗಳಲ್ಲಿ 68.3 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟಾಗುವ ಮೂಲಕ 171 ರನ್‌ಗಳ ಸೋಲು ಅನುಭವಿಸಿತ್ತು.





