ಮಸೀದಿ, ಮಂದಿರದ ಬೆಸುಗೆ ಈ ‘ಸೌಹಾರ್ದ ಸೇತುವೆ’
ಸೌಹಾರ್ದ ಸೇತುವೆ

*** ಕಡೇಶಿವಾಲ್ಯ-ಅಜಿಲಮೊಗರು ನೇತ್ರಾವತಿ ನದಿಗೆ ನಿರ್ಮಾಣವಾಗಲಿದೆ ದ್ವಿಪಥ ಸೇತುವೆ
***ಕನಸಾಗಲಿದೆ ಈ ಭಾಗದ ಬೇಡಿಕೆ, ಸಚಿವ ರಮಾನಾಥ ರೈಯವರ ಕನಸಿನ ಯೋಜನೆ
ಬಂಟ್ವಾಳ, ಮಾ.14: ತಾಲೂಕಿನ ಕಡೇಶಿವಾಲ್ಯ ಮತ್ತು ಮಣಿನಾಲ್ಕೂರು ಗ್ರಾಮದ ನೇತ್ರಾವತಿ ನದಿಗೆ ಅಡ್ಡವಾಗಿ ಕೆಲವೇ ತಿಂಗಳಲ್ಲಿ ಸೇತುವೆಯೊಂದು ನಿರ್ಮಾಣವಾಗಲಿದ್ದು, ಆ ಮೂಲಕ ಅನಾದಿಕಾಲದಿಂದ ಈ ಭಾಗದ ಹಿಂದೂ, ಮುಸ್ಲಿಮರ ನಡುವಿನ ಶಾಂತಿ, ಸೌಹಾರ್ದದ ಪ್ರತೀಕವಾದ ಮಸೀದಿ, ಮಂದಿರದ ಸಂಪರ್ಕ ಸುಲಭವಾಗಲಿದೆ. ವ್ಯಾಪಾರ, ವಹಿವಾಟು, ಪ್ರಯಾಣ, ಪ್ರವಾಸೋದ್ಯಮಕ್ಕೂ ಅನುಕೂಲಕರವಾಗಲಿದೆ. ಇಲ್ಲಿ ದೇವಸ್ಥಾನದ ಅಂಗಲದಲ್ಲಿ ನಿಂತು ನೋಡಿದರೆ ಮಸೀದಿ ಕಾಣುತ್ತದೆ. ಮಸೀದಿಯೊಳಗೆ ನಿಂತು ದೃಷ್ಟಿ ಹಾಯಿಸಿದರೆ ದೇವಸ್ಥಾನದ ಒಂದಕ್ಕೊಂದು ಜೋಡಿಸಿ ಇಟ್ಟಂತೆ ಮಂದಿರದ ಮಾಡಿನ ಸೊಬಗು ಗೋಚರಿಸುತ್ತದೆ. ಆದರೆ ಹಿಂದೂ, ಮುಸ್ಲಿಮರ ಈ ಎರಡು ಶ್ರದ್ಧಾ ಕೇಂದ್ರದ ಸಂಪರ್ಕ ಅಷ್ಟು ಸುಲಭವಲ್ಲ. ಮಸೀದಿ, ಮಂದಿರವನ್ನು ನೇತ್ರಾವತಿ ನದಿ ಪ್ರತ್ಯೇಕಿಸಿದೆ. ಝುಳು ಝುಳು ಹರಿಯುವ ನೇತ್ರಾವತಿ ನದಿಯ ಬಲದಂಡೆಯ ಮಣಿನಾಲ್ಕೂರು ಗ್ರಾಮದಲ್ಲಿ ಅಜಿಲಮೊಗರು ಮಸೀದಿ ಮತ್ತು ದರ್ಗಾ ಇದ್ದರೆ ಎಡದಂಡೆಯ ಕಡೇಶಿವಾಲ್ಯ ಗ್ರಾಮದಲ್ಲಿ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವಿದೆ. ಅಜಿಲಮೊಗರು ಮಸೀದಿ ಹಾಗೂ ಕಡೇಶಿವಾಲ್ಯ ಲಕ್ಷ್ಮೀನರಸಿಂಹ ಸ್ವಾಮೀ ದೇವಸ್ಥಾನವು ಪುರಾತನ ಕಾಲದಿಂದಲೂ ಪ್ರಸಿದ್ಧಿಯನ್ನು ಹೊಂದಿರುವ ಧಾರ್ಮಿಕ ಕೇಂದ್ರಗಳಾಗಿವೆ. ಈಗಲೂ ಹಲವು ಜಿಲ್ಲೆಗಳಿಂದ ಭಕ್ತರು ಈ ಎರಡೂ ಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಇದು ಇಲ್ಲಿನ ಹಿಂದೂ, ಮುಸ್ಲಿಮರ ನಡುವಿನ ಶಾಂತಿ, ಸೌಹಾರ್ದದ ಪ್ರತೀಕವೂ ಆಗಿದೆ. ಈ ಎರಡೂ ಶ್ರದ್ಧಾ ಕೇಂದ್ರಗಳನ್ನು ನೇತ್ರಾವತಿ ನದಿ ಪ್ರತ್ಯೇಕಿಸಿರುವುದರಿಂದ ಸಂಪರ್ಕಕ್ಕೆ ದೋಣಿಯನ್ನೇ ಆಶ್ರಯಿಸ ಬೇಕಿದೆ. ಅಲ್ಲದೆ ಎರಡೂ ಭಾಗದ ಜನರು ವ್ಯಾಪಾರ, ವಹಿವಾಟಿಗೆ ನಗರ, ಪೇಟೆಯನ್ನು ತಲುಪಲು ಹಲವು ಕಿಲೋ ಮೀಟರ್ ಸುತ್ತುವರಿಯಬೇಕಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ, ಈ ಕ್ಷೇತ್ರದ ಶಾಸಕರೂ ಆದ ಬಿ.ರಮಾನಾಥ ರೈ ಅವರ ಕನಸಿನಂತೆ ಈ ಎರಡು ಆರಾಧಾನಾಲಯಗಳ ಸಂಪರ್ಕಿಸಲು ’ಸೌಹಾರ್ದ ಸೇತುವೆ’ಯೊಂದು ರಚನೆಯಾಗಲಿದೆ. 36 ಕೋಟಿ ರೂ. ವೆಚ್ಚದಲ್ಲಿ ದ್ವಿಪಥ ಸೇತುವೆ ನಿರ್ಮಾಣಗೊಳ್ಳಲಿದೆ. 350 ಮೀಟರ್ ಉದ್ದದ ಈ ಸೇತುವೆಯನ್ನು ಕೆಆರ್‌ಡಿಸಿಎಲ್‌ನವರು ನಿರ್ಮಿಸುವರು. ಈ ಕುರಿತು ಲೋಕೋಪಯೋಗಿ ಇಲಾಖೆ ಕಾಮಗಾರಿಯ ರೇಖಾ ಅಂದಾಜುಪಟ್ಟಿಯನ್ನು ಕೆಆರ್‌ಡಿಸಿಎಲ್‌ಗೆ ಸಲ್ಲಿಸಿದೆ. ಸುಮಾರು 10 ಮೀಟರ್ ಎತ್ತರಕ್ಕೆ ನಿರ್ಮಾಣವಾಗಲಿರುವ ಈ ಸೇತುವೆ ನಿರ್ಮಾಣವಾದ ಬಳಿಕ ಬಿ.ಸಿ.ರೋಡ್-ಪಾಣೆಮಂಗಳೂರು ಸೇತುವೆಯಂತೆ ಕಾಣಿಸಬಹುದು.
***ಒಂದು ಸೇತುವೆ ಹತ್ತಾರು ಲಾಭ***
ಕಡೇಶಿವಾಲ್ಯ ಮತ್ತು ಅಜಿಲಮೊಗರು ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಾಣವಾಗುವ ಸೌಹಾರ್ದ ಸೇತುವೆಯಿಂದ ಎರಡೂ ಭಾಗದ ಜನರಿಗೆ ಹತ್ತಾರು ಲಾಭವಾಗಲಿದೆ. ಈ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದರೆ ಈ ಭಾಗದ ರೈತರಿಗೆ ಮತ್ತು ಸ್ಥಳೀಯರಿಗೆ ಕೃಷಿ ಉತ್ಪನ್ನಗಳನ್ನು ಉಪ್ಪಿನಂಗಡಿ, ಪುತ್ತೂರು ಕಡೆಗಳಿಗೆ ಕೊಂಡೊಯ್ಯಲು ಸುಲಭವಾಗಲಿದೆ. ಮಣಿನಾಲ್ಕೂರು, ದೇವಶ್ಯಮೂಡೂರು, ಸರಪಾಡಿ, ಕಡೇಶಿವಾಲ್ಯದ ರೈತರಿಗೆ ಕನಿಷ್ಠ 15ರಿಂದ 20 ಕಿ.ಮೀ.ನಷ್ಟು ಅಂತರ ಕಡಿಮೆಯಾಗುತ್ತದೆ. ಸೇತುವೆಯಿಂದ ರಾಷ್ಟ್ರೀಯ ಹೆದ್ದಾರಿ 75 ಮತ್ತು ರಾಷ್ಟ್ರೀಯ ಹೆದ್ದಾರಿ 234 ಸಂಪರ್ಕವೂ ಹತ್ತಿರವಾಗಲಿದೆ. ಸಾಮಾನ್ಯವಾಗಿ ದ.ಕ. ಜಿಲ್ಲೆಯಲ್ಲಿ ವೈದ್ಯಕೀಯ ಸಂಪರ್ಕಕ್ಕಾಗಿ ಒಂದೋ ಮಂಗಳೂರು ಇಲ್ಲವೇ ಪುತ್ತೂರನ್ನು ಸಂಪರ್ಕಿಸಲಾಗುತ್ತದೆ. ಅಜಿಲಮೊಗರು ಭಾಗದ ಜನರಿಗೆ ಮಲ್ಟಿ ಸ್ಪೆಷಾಲಿಸ್ಟ್ ಆಸ್ಪತ್ರೆಗಳಿಗೆ ತೆರಬೇಕೆಂದಿದ್ದರೆ ಬಿ.ಸಿ.ರೋಡ್ ಕಡೆಗೆ ಬರಬೇಕು. ಸೇತುವೆ ನಿರ್ಮಾಣವಾದರೆ ಪುತ್ತೂರಿಗೂ ಹೋಗುವ ಅವಕಾಶವಿದೆ. ಇದಲ್ಲದೆ ಸಮೀಪದ ಪ್ರದೇಶಗಳಿಗೆ ತೆರಳುವವರು ಸುತ್ತು ಬಳಸಿ ಸಾಗಬೇಕಿತ್ತು. ಸೇತುವೆ ನಿರ್ಮಾಣವಾದ ಬಳಿಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ದ ಗಂಟೆಯೊಳಗೆ ತಲುಪಬಹುದು.







