ಮಹಿಳೆಯರ ಮತವನ್ನು ಅಧಿಕಾರಿಯೇ ಚಲಾಯಿಸಿದರು, ಕಮಲದ ಚಿಹ್ನೆಗೆ ಮತ ಹಾಕಲು ಒತ್ತಡ
ಮಹಿಳೆಯ ಹೇಳಿಕೆಯ ವೈರಲ್ ವೀಡಿಯೊ
ಹೊಸದಿಲ್ಲಿ, ಮಾ. 15 : ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಿಗೇ ಇಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಹಿರಿಯ ರಾಜಕೀಯ ಮುಖಂಡರೇ ನೀಡಿರುವ ಹೇಳಿಕೆ ಈಗಾಗಲೇ ಚರ್ಚೆಯಲ್ಲಿದೆ. ಈ ನಡುವೆ ಮಹಿಳೆಯೊಬ್ಬರು ಇದೇ ರೀತಿಯ ಆರೋಪ ಮಾಡುವ ವೀಡಿಯೊವೊಂದು ಬೆಳಕಿಗೆ ಬಂದಿದ್ದು ಅದೀಗ ವೈರಲ್ ಆಗಿದೆ. ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಬಳಗದ ಜನಸತ್ತಾ ವರದಿ ಮಾಡಿದೆ.
ಈ ವೈರಲ್ ವೀಡಿಯೊ India Against BJP ಹೆಸರಿನ ಯೂಟ್ಯೂಬ್ ಪೇಜ್ ನಲ್ಲಿ ಅಪ್ಲೋಡ್ ಆಗಿದೆ. ಆ ಮಹಿಳೆಯ ಪ್ರಕಾರ ಮತಗಟ್ಟೆಯಲ್ಲಿ ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿಯೇ ಅಕ್ರಮದಲ್ಲಿ ತೊಡಗಿದ್ದ. ವೀಡಿಯೊವನ್ನು ಈಗಾಗಲೇ ೬ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. " ಯೂಪಿಮೆ ಇವಿಎಂ ಗಡ್ಬಡಿ ಕಾ ಸಬೂತ್ ( ಯುಪಿಯಲ್ಲಿ ಇವಿಎಂ ಅಕ್ರಮದ ಸಾಕ್ಷ್ಯ) ಎಂಬುದು ವೀಡಿಯೋದ ಹೆಸರು.
ವೀಡಿಯೋದಲ್ಲಿ ಮಹಿಳೆಯ ಹೇಳಿಕೆ ಹೀಗಿದೆ : " ಚುನಾವಣಾ ಅಧಿಕಾರಿ ಹಾಗು ಇವಿಎಂ ನಲ್ಲಿ ಇರುವ ಅಧಿಕಾರಿ ಸ್ವತಃ ತನ್ನ ಕೈಗಳಿಂದ ಬಟನ್ ಒತ್ತುತ್ತಿದ್ದ. ಮಹಿಳೆಯರು ಹೋದಾಗ ಮತ ಯಂತ್ರ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಿದ್ದ. ಆದರೆ ಆತ ಆಗ ಅದನ್ನು ಆನ್ ಮಾಡುತ್ತಲೇ ಇರಲಿಲ್ಲ. ಅಲ್ಲಿ ಅಕ್ರಮವಾಗಿ ಮತದಾನ ನಡೆಯುತ್ತಿತ್ತು. ಅವರು ಕಮಲದ ಚಿಹ್ನೆಗೆ ಮತ ಹಾಕಿಸುತ್ತಿದ್ದರು. ಇದೆಲ್ಲಾ ಇಲ್ಲಿ ಜಾಟರು ಮಾಡಿರುವ ಕೆಲಸ. ಮತಗಟ್ಟೆಯಿಂದ 100 ಮೀಟರ್ ದೂರದಲ್ಲಿ ಯಾರೂ ಇರಬಾರದು. ಆದರೆ ಅವರು ಅಲ್ಲಿ ಚಾ - ಪಾನೀಯ ಎಲ್ಲ ಮಾಡಿಸುತ್ತಿದ್ದರು. ಇದರಲ್ಲಿ ಪೊಲೀಸರೂ ಸೇರಿದ್ದರು.
ನೀವು ಯಾರಿಗೆ ಮತ ಹಾಕಲು ಹೋಗಿದ್ದೀರಿ ಎಂದು ಆ ಮಹಿಳೆಯನ್ನು ಕೇಳಿದಾಗ ಆಕೆ " ನಾನು ಮಾಯಾವತಿಯ ಬೆಂಬಲಿಗೆ. ಆಕೆಯ ಪಕ್ಷದ ಹಾಜಿ ಹೆಸರಿನ ಅಭ್ಯರ್ಥಿಗೆ ಮತ ಹಾಕಲು ಹೋಗಿದ್ದೆ " ಎಂದು ಹೇಳಿದ್ದಾಳೆ.
ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಆ ಬಳಿಕ ಬಿಎಸ್ಪಿ ನಾಯಕಿ ಮಾಯಾವತಿ ಮತಯಂತ್ರಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿ ಮತಪತ್ರ ಬಳಸಿ ಮರುಚುನಾವಣೆ ನಡೆಸಬೇಕೆಂದು ಆಗ್ರಹಿಸಿದ್ದರು. ಇದನ್ನು ಮಾಜಿ ಮುಖ್ಯಮಂತ್ರಿ, ಎಸ್ಪಿ ಅಧ್ಯಕ್ಷ ಅಖಿಲೇಶ್ ಕೂಡ ಬೆಂಬಲಿಸಿದ್ದರು. ಲಾಲು ಮತ್ತಿತರ ರಾಜಕೀಯ ಮುಖಂಡರೂ ಇದಕ್ಕೆ ಧ್ವನಿ ಗೂಡಿಸಿದರು.
ಬಳಿಕ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಬಿಸಿಬಿಸಿ ಪರ -ವಿರೋಧ ಚರ್ಚೆಗಳು ನಡೆಯುತ್ತಿವೆ. ದಿಲ್ಲಿ ಮುನಿಸಿಪಲ್ ಚುನಾವಣೆಯನ್ನು ಮತಪತ್ರ ಬಳಸಿ ನಡೆಸಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು. ಆದರೆ ಅದನ್ನು ಆಯೋಗ ತಿರಸ್ಕರಿಸಿದೆ.
ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಅಕ್ರಮ ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡ ಸುಬ್ರಮಣ್ಯನ್ ಸ್ವಾಮಿ ಈ ಹಿಂದೆ ನೀಡಿದ ಹೇಳಿಕೆಯ ವೀಡಿಯೊ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.