12ವರ್ಷದ ಬಾಲಕಿ ಮೇಲೆ ದೌರ್ಜನ್ಯ: ಮಲ ತಂದೆಯ ಬಂಧನ

ಮಾನಂದವಾಡಿ, ಮಾ. 15; 12ವರ್ಷದ ಬಾಲಕಿಗೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯವೆಸಗಿದ ಘಟನೆಯಲ್ಲಿ ಮಲತಂದೆಯನ್ನು ಬಂಧಿಸಲಾಗಿದೆ. ಪಿಚ್ಚಂಗೋಡ್ ಪರಂಬತ್ ಜಾಸಿರ್(28)ನನ್ನು ತಿರುನೆಲ್ಲಿ ಎಸ್ಸೈ ಜೆ. ಜಿನೇಶ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಈತ ಬಾಲಕಿಯ ಮಲತಂದೆಯಾಗಿದ್ದಾನೆ.
ಬಾಲಕಿಯ ತಾಯಿಮತ್ತು ಈತ ಸೇರಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಆದರೆ ಬಾಲಕಿಯ ತಾಯಿ ಎಂಟು ತಿಂಗಳ ಗರ್ಭಿಣಿಯಾದ್ದರಿಂದ ಈಗ ಕಾನೂನುಕ್ರಮ ಕೈಗೊಳ್ಳುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆರನೆ ಕ್ಲಾಸ್ ವಿದ್ಯಾರ್ಥಿಯ ಮಾನಸಿಕ ಸ್ಥಿತಿಯ ಬಗ್ಗೆ ಶಂಕೆಗೊಂಡ ಶಾಲಾಧಿಕಾರಿಗಳು ಬಾಲಕಿಯನ್ನು ಕೌನ್ಸಿಲಿಂಗ್ ನಡೆಸಿದಾಗ ಬಾಲಕಿ ತಾನು ಅನುಭವಿಸುತ್ತಿರುವ ಕಷ್ಟಗಳನ್ನು ವಿವರಿಸಿದ್ದಾಳೆ. ಆಕೆಗೆ ಹೊಡೆದು ಮನೆಯ ಎಲ್ಲ ಕೆಲಸಗಳನ್ನು ಮಾಡಿಸುತ್ತಿದ್ದರು. ಬಾಲಕಿಗೆ ದೌರ್ಜನ್ಯವೆಸಗಿದ ಹೆಸರಲ್ಲಿ ಜುವೈನಲ್ ಕಾನೂನು ಪ್ರಕಾರ ಹಾಗೂ ಬೆದರಿಕೆಯೊಡ್ಡಿದ್ದಕ್ಕೆ ಪೊಲೀಸ್ ಆ್ಯಕ್ಟ್ ಪ್ರಕಾರ ಕೇಸು ದಾಖಲಿಸಲಾಗಿದೆ ಎಂದು ತಿರುನೆಲ್ಲಿ ಎಸ್ಸೈ ಜೆ. ಜಿನೇಶ್ ತಿಳಿಸಿದರೆಂದು ವರದಿ ಯಾಗಿದೆ.