ಮೋದಿಗೆ ಬಿಎಸ್ಪಿ ನಾಯಕಿಯ ಹೊಸ ಸವಾಲು
ಮತಯಂತ್ರ ಅಕ್ರಮ ಆರೋಪ ಬಿಡದ ಬಿಎಸ್ಪಿ

ಲಕ್ನೌ,ಮಾ.15 : ವಿದ್ಯುನ್ಮಾನ ಮತಯಂತ್ರಗಳ ಬದಲು ಮತಪತ್ರ (ಬ್ಯಾಲೆಟ್ ಪೇಪರ್) ಉಪಯೋಗಿಸಿ ಮತ್ತೊಂದು ಚುನಾವಣೆ ಎದುರಿಸಿ ಗೆದ್ದು ತಮ್ಮ 56 ಇಂಚುಗಳ ಎದೆಯನ್ನು ತೋರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಉತ್ತರ ಪ್ರದೇಶದ ಬಿಎಸ್‌ಪಿ ನಾಯಕಿ ರಿತು ಸಿಂಗ್ ಸವಾಲು ಹಾಕಿದ್ದಾರೆ.
‘‘ಅವರು ಇದಕ್ಕೆ ಒಪ್ಪಿದರೆ ಬಿಜೆಪಿಗೆ ಧಮ್ ಇದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ,’’ ಎಂದು ಅವರು ಹೇಳಿಕೊಂಡಿದ್ದಾರೆ.
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕೂಡ ವಿದ್ಯುನ್ಮಾನ ಮತಯಂತ್ರಗಳನ್ನು ಬಿಜೆಪಿ ದುರ್ಬಳಕೆ ಮಾಡಿ ಚುನಾವಣೆ ಗೆದ್ದಿದೆ ಎಂದು ಆರೋಪಿಸಿದ್ದರು.
ಆದರೆ ವಿಪಕ್ಷಗಳ ಟೀಕೆಗಳನ್ನು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅಪಹಾಸ್ಯ ಮಾಡಿದ್ದು ಅದರ ಸಾಧ್ಯತೆ ಸೊನ್ನೆ ಎಂದಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ವಿದ್ಯುನ್ಮಾನ ಮತಯಂತ್ರಗಳ ಬಳಕೆಯ ಬಗ್ಗೆ ಮರುಚಿಂತನೆ ನಡೆಸಬೇಕೆಂದು ಹೇಳಿದರಲ್ಲದೆ ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡ ಮತಯಂತ್ರಗಳ ಬದಲು ಬ್ಯಾಲೆಟ್ ಪೇಪರ್ ಗಳಿಗೇ ಮೊರೆ ಹೋಗಿವೆ ಎಂದಿದ್ದಾರೆ.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಿಪಕ್ಷಗಳ ಆರೋಪಗಳನ್ನು ನಿರಾಕರಿಸಿದ್ದು ಚುನಾವಣೆಯ ಫಲಿತಾಂಶಗಳನ್ನು ಬಿ ಎಸ್ ಪಿ ಮುಖ್ಯಸ್ಥೆ ಒಪ್ಪಿಕೊಳ್ಳಬೇಕು ಎಂದಿದ್ದಾರೆ. ಮೋದಿ ಸರಕಾರ ನಡೆಸಿದ ಹಲವಾರು ಉತ್ತಮ ಕಾರ್ಯಗಳಿಂದಲೇ ಅದು ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಜೇಟ್ಲಿ ಹೇಳಿಕೊಂಡಿದ್ದಾರೆ.