ಪಂಜಾಬ್‌ನಲ್ಲಿ ಇವಿಎಂಗಳಲ್ಲಿ ಭಾರೀ ಅಕ್ರಮ:ಕೇಜ್ರಿ ಆರೋಪ

ಹೊಸದಿಲ್ಲಿ,ಮಾ.15: ಇವಿಎಂಗಳಲ್ಲಿ ಅಕ್ರಮ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಪ್‌ನ ಕಳಪೆ ಪ್ರದರ್ಶನಕ್ಕೆ ಕಾರಣವಾಗಿರಬಹುದು ಎಂದು ಬುಧವಾರ ಇಲ್ಲಿ ಆರೋಪಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ ಅವರು, ಆಪ್‌ನ ಸುಮಾರು ಶೇ.20ರಿಂದ ಶೇ.26ರಷ್ಟು ಮತಗಳು ಶಿರೋಮಣಿ ಅಕಾಲಿದಳ-ಬಿಜೆಪಿ ಮೈತ್ರಿಕೂಟಕ್ಕೆ ವರ್ಗಾವಣೆಗೊಂಡಿರಬಹುದು ಎಂದು ಹೇಳಿದರು.
ಆಪ್‌ಗೆ ಭಾರೀ ಗೆಲುವು ದೊರೆಯಲಿದೆ ಎಂದು ಹೆಚ್ಚಿನೆಲ್ಲ ರಾಜಕೀಯ ಪಂಡಿತರು ಭವಿಷ್ಯ ನುಡಿದಿದ್ದರು. ಹೀಗಿರುವಾಗ ಪಕ್ಷಕ್ಕೆ ಕೇವಲ 20 ಸ್ಥಾನಗಳು ಸಿಕ್ಕಿದ್ದು ಹೇಗೆ ಎನ್ನುವುದು ಅರ್ಥವಾಗುತ್ತಿಲ್ಲ ಮತ್ತು ಇದು ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆಯ ಕುರಿತು ಪ್ರಶ್ನೆಯನ್ನೆತ್ತಿದೆ ಎಂದು ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಪ್ ವಿಜಯ ಸಾಧಿಸಲಿದೆ ಎನ್ನುವುದು ಮೊದಲೇ ನಿರ್ಧಾರವಾಗಿತ್ತು,ಹಾಗಿದ್ದಾಗ ಶೇ.30ರಷ್ಟು ಮತಗಳು ಅಕಾಲಿದಳಕ್ಕೆ ಹೋಗಿದ್ದಾದರೂ ಹೇಗೆ? ಕಾಂಗ್ರೆಸ್ ಉತ್ತಮ ಸಾಧನೆಯೊಂದಿಗೆ ಮೂರನೇ ಎರಡರಷ್ಟು ಬಹುಮತ ಗಳಿಸಲಿದೆ ಎಂದೂ ಯಾರೂ ಹೇಳಿರಲಿಲ್ಲ. ಇವಿಎಂಗಳಲ್ಲಿ ಅಕ್ರಮಗಳ ಮೂಲಕ ಆಪ್‌ನ ಶೇ.20-25ರಷ್ಟು ಮತಗಳು ಎಸ್‌ಎಡಿ-ಬಿಜೆಪಿ ಮೈತ್ರಿಕೂಟಕ್ಕೆ ವರ್ಗಾವಣೆಗೊಂಡಿರಬಹುದು ಎಂದು ನಾವು ಶಂಕಿಸಿದ್ದೇವೆ ಎಂದರು.
ಮತಯಂತ್ರಗಳಲ್ಲಿ ಮುದ್ರಿತ ಚೀಟಿ ಲಭ್ಯವಿದ್ದ ಪಂಜಾಬನ 32 ಮತಕ್ಷೇತ್ರಗಳಲ್ಲಿ ಇವಿಎಂಗಳಲ್ಲಿ ದಾಖಾಲಾಗಿರುವ ಮತಗಳನ್ನು ಮುದ್ರಿತ ಚೀಟಿಗಳೊಂದಿಗೆ ಹೋಲಿಸಬೇಕು ಎಂದು ಆಗ್ರಹಿಸಿದ ಅವರು, ಇದು ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಜನತೆಯ ನಂಬಿಕೆಯ ಪ್ರಶ್ನೆಯಾಗಿದೆ ಎಂದರು.
2015ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್‌ನ ಭಾರೀ ವಿಜಯವನ್ನು ಹೇಗೆ ವಿವರಿಸುತ್ತೀರಾ ಎಂಬ ಪ್ರಶ್ನೆಗೆ ಕೇಜ್ರಿವಾಲ್, ಅದಕ್ಕೆ ಚುನಾವಣೆಯಲ್ಲಿ ಗೆಲುವು ಸಿದ್ಧ ಎಂಬ ಬಿಜೆಪಿಯ ಅತಿಯಾದ ಆತ್ಮವಿಶ್ವಾಸ ಕಾರಣವಾಗಿರಬಹುದು.ಅದರಿಂದಾಗಿಯೇ ಅವರು ಇವಿಎಂಗಳಲ್ಲಿ ಅಕ್ರಮ ನಡೆಸುವ ಗೋಜಿಗೆ ಹೋಗಿರಲಿಕ್ಕಿಲ್ಲ. ಇದು ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಗೆಲುವಿಗೂ ವಿವರಣೆಯಾಗಿದೆ. ಅಲ್ಲಿಯೂ ಗೆಲ್ಲುವ ಬಗ್ಗೆ ಬಿಜೆಪಿ ಅತಿಯಾದ ಆತ್ಮವಿಶ್ವಾಸ ಹೊಂದಿತ್ತು ಎಂದು ಉತ್ತರಿಸಿದರು.