ಪಠಾಣಕೋಟ್ ವಾಯುನೆಲೆಯಲ್ಲಿ ಮುಂದುವರಿದಿರುವ ಶೋಧಕಾರ್ಯ

ಪಠಾಣಕೋಟ್,ಮಾ.15: ಪಂಜಾಬಿನ ಪಠಾಣಕೋಟ್ ವಾಯುನೆಲೆಯ ಬಳಿ ಮಂಗಳವಾರ ಶಂಕಾಸ್ಪದ ವ್ಯಕ್ತಿಗಳಿರುವ ಬಗ್ಗೆ ಮಾಹಿತಿ ಲಭಿಸಿದ್ದ ಹಿನ್ನೆಲೆಯಲ್ಲಿ ಘೋಷಿಲಾಗಿದ್ದ ಕಟ್ಟೆಚ್ಚರ ಬುಧವಾರವೂ ಮುಂದುವರಿದಿದೆ. ವಾಯುನೆಲೆ ಸಮೀಪದ ಗ್ರಾಮಗಳು ಮತ್ತು ಇತರ ಪ್ರದೇಶಗಳಲ್ಲಿ ಪಂಜಾಬ್ ಪೊಲೀಸ್, ಸೇನೆ, ವಾಯುಪಡೆ ಮತ್ತು ಹಿಮಾಚಲ ಪ್ರದೇಶ ಪೊಲೀಸರ ಜಂಟಿ ಶೋಧ ಕಾರ್ಯಾಚರಣೆ ಜಾರಿಯಲ್ಲಿದೆ.
ಮುಂಜಾಗ್ರತಾ ಕ್ರಮವಾಗಿ ನಡೆಸಲಾಗುತ್ತಿರುವ ಶೋಧ ಕಾರ್ಯಾಚರಣೆಯಲ್ಲಿ 500ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ ಎಂದು ಪಠಾಣಕೋಟ್ ಎಸ್‌ಎಸ್‌ಪಿ ನೀಲಾಂಬರಿ ವಿಜಯ ಜಗದಾಳೆ ಅವರು ಸುದ್ದಿಗಾರರಿಗೆ ತಿಳಿಸಿದರು. ಹೆಲಿಕಾಪ್ಟರ್‌ಗಳನ್ನೂ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದೆ ಎಂದರು.
ಕಳೆದ ವರ್ಷದ ಜ.1ರಂದು ರಾತ್ರಿ ಪಠಾಣಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರು ಏಳು ಯೋಧರನ್ನು ಹತ್ಯೆಗೈದಿದ್ದರು.ಭದ್ರತಾ ಸಿಬ್ಬಂದಿಗಳ ಪ್ರತಿದಾಳಿಯಲ್ಲಿ ನಾಲ್ವರು ಭಯೋತ್ಪಾದಕರೂ ಬಲಿಯಾಗಿದ್ದರು.
Next Story