ಕರ್ನಾಟಕ ಬಜೆಟ್-2017: ಉಡುಪಿ ಜಿಲ್ಲೆಗೆ ಬೋನಸ್‌ನೊಂದಿಗೆ ಮೂರು ತಾಲೂಕುಗಳ ಕೊಡುಗೆ

ಉಡುಪಿ, ಮಾ.15:ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬುಧವಾರ ಮಂಡಿಸಿದ ತಮ್ಮ ದಾಖಲೆಯ 12ನೆ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಒಂದು ಬೋನಸ್‌ನೊಂದಿಗೆ ಮೂರು ನೂತನ ತಾಲೂಕುಗಳನ್ನು ನೀಡಿದ್ದಾರೆ.
ಜಿಲ್ಲೆಯ ಜನತೆ ಬಹುಕಾಲದಿಂದ ನಿರೀಕ್ಷಿಸಿದ್ದ ಬೈಂದೂರು ಮತ್ತು ಬ್ರಹ್ಮಾವರ ತಾಲೂಕುಗಳ ರಚನೆಯ ಘೋಷಣೆಯೊಂದಿಗೆ ಕಾಪುವನ್ನು ಸಹ ತಾಲೂಕಾಗಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಮೂರು ಹೊಸ ತಾಲೂಕು ರಚನೆಯ ಘೋಷಣೆಯನ್ನು ಹೊರತು ಪಡಿಸಿದರೆ ಸಿದ್ಧರಾಮಯ್ಯ ಅವರು ಉಡುಪಿ ಜಿಲ್ಲೆಗೆ ವಿಶೇಷವಾದುದೇನನ್ನೂ ನೀಡಿಲ್ಲ ಎಂದೇ ಹೇಳಬಹುದು.
ಉಡುಪಿಯಲ್ಲಿ ಈಜು ಅಕಾಡಮಿ ಸ್ಥಾಪನೆ, ಐದು ಕೋಟಿ ರೂ.ವೆಚ್ಚದಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕಾಗಿ 75ಮೀ. ಉದ್ದ ಜಟ್ಟಿಯ ವಿಸ್ತರಣೆ ಸೇರಿದೆ.
ಇನ್ನು ಕರಾವಳಿ ಜಿಲ್ಲೆಗೆ ಒಟ್ಟಾರೆಯಾಗಿ ನೀಡಿದ ಕೊಡುಗೆಯಲ್ಲಿ ಉಡುಪಿ ಜಿಲ್ಲೆಗೂ ಲಾಭವಾಗುವ ಎರಡು ಘೋಷಣೆಗಳೆಂದರೆ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಅರಬೀಸಮುದ್ರ ಸೇರುವ ನದಿಗಳಿಗೆ ಅಲ್ಲಲ್ಲಿ ಕಿಂಡಿ ಹಾಗೂ ಉಪ್ಪು ನೀರಿನ ತಡೆ ಅಣೆಕಟ್ಟುಗಳನ್ನು ನಿರ್ಮಿಸುವ ಪಶ್ಚಿಮ ವಾಹಿನಿಗೆ ಯೋಜನೆಗೆ 100 ಕೋಟಿ ರೂ. ಘೋಷಣೆ ಹಾಗೂ ಮೂರು ಜಿಲ್ಲೆಗಳ 200ರಷ್ಟು ಮಂಜುಗಡ್ಡೆ ಸ್ಥಾವರ ಹಾಗೂ 35 ಶೈತ್ಯಾಗಾರಗಳಿಗೆ ವಿದ್ಯುತ್ ಮೇಲಿನ ಸಹಾಯಧನವನ್ನು ಪ್ರತಿ ಯುನಿಟ್‌ಗೆ 1.75ರೂ.ಗೆ ಏರಿಕೆ ಹಾಗೂ ಪ್ರತಿ ಸ್ಥಾವರಕ್ಕೆ ಪ್ರತಿ ವರ್ಷ ಇರುವ ಮಿತಿಯನ್ನು 3.50ಲಕ್ಷ ರೂ.ಗಳಿಗೆ ಏರಿಸಿರುವುದು.
ಮತ್ಸಾಶ್ರಯ ವಸತಿ ಯೋಜನೆಯಲ್ಲಿ 3000 ಫಲಾನುಭವಿಗಳ ಆಯ್ಕೆ ಯಲ್ಲಿ ಉಡುಪಿ ಜಿಲ್ಲೆಗೂ ಪಾಲು ಸಿಗುವ ಸಾಧ್ಯತೆ ಇದೆ. ಕಳೆದ ಬಾರಿಯ ಬಜೆಟ್‌ನಲ್ಲಿ ಉಡುಪಿಗೆ ಅಥ್ಲೆಟಿಕ್ ಅಕಾಡೆಮಿ ಮಂಜೂರಾಗಿದ್ದರೆ ಈ ಬಾರಿ ಮುಖ್ಯಮಂತ್ರಿ ಘೋಷಿಸಿರುವ ನಾಲ್ಕು ಅಕಾಡಮಿಗಳಲ್ಲಿ ಈಜು ಅಕಾಡಮಿ ಉಡುಪಿಯಲ್ಲಿ ತಲೆ ಎತ್ತಲಿದೆ. ಅಥ್ಲೆಟಿಕ್ ಅಕಾಡಮಿ ಸ್ಥಾಪನೆ ಸಿದ್ಧತೆ ಅಂತಿಮ ಹಂತದಲ್ಲಿದ್ದರೆ, ಈಜು ಅಕಾಡಮಿಗೆ, ಅಜ್ಜರಕಾಡಿನಲ್ಲಿ ಈಗಿರುವ ಈಜು ಕೊಳದೊಂದಿಗೆ ಇನ್ನೊಂದು 50ಮೀ.ಗಳ ಈಜುಕೊಳ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ.
ತಾಲೂಕು ರಚನೆ:
ಬೈಂದೂರು ಮತ್ತು ಬ್ರಹ್ಮಾವರ ತಾಲೂಕುಗಳ ರಚನೆಗೆ ಮೂರು ದಶಕಗಳಿಗೂ ಅಧಿಕ ಸಮಯದಿಂದ ಒತ್ತಾಯವಿದ್ದು, ಇದಕ್ಕಾಗಿ ಹಲವು ಹೋರಾಟಗಳೂ ನಡೆದಿವೆ. 2012ರ ಬಜೆಟ್‌ನಲ್ಲಿ ಅಂದಿನ ಬಿಜೆಪಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಘೋಷಿಸಿದ 43 ಹೊಸ ತಾಲೂಕುಗಳ ಪಟ್ಟಿಯಲ್ಲೂ ಬ್ರಹ್ಮಾವರ ಮತ್ತು ಬೈಂದೂರು ಸ್ಥಾನ ಪಡೆದಿದ್ದವು.
ಆದರೆ ಕಾಪು ತಾಲೂಕು ರಚನೆಯ ಬೇಡಿಕೆ ತೀರಾ ಈಚಿನದ್ದು. ಕಾಪು ಶಾಸಕ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಬ್ರಹ್ಮಾವರವನ್ನು ಹಿಂದಿಕ್ಕಿ ಕಾಪುವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿದ ಬಳಿಕ ಕಾಪು ತಾಲೂಕು ರಚನೆಯ ಧ್ವನಿ ಜೋರಾಗಿ ಕೇಳುತ್ತಿರಲ್ಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಸೊರಕೆ ಅವರೇ ಕಾಪು ತಾಲೂಕು ರಚನೆಯ ಬಗ್ಗೆ ಮಾತನಾಡಿದ್ದು, ಇದೀಗ ಬಜೆಟ್‌ನಲ್ಲಿ ಘೋಷಣೆಯಾದ 49 ತಾಲೂಕುಗಳ ಪಟ್ಟಿಯಲ್ಲಿ ಕಾಪು ಹೆಸರನ್ನು ಸೇರಿಸುವಲ್ಲೂ ಯಶಸ್ವಿಯಾಗಿದ್ದಾರೆ.
ಈ ಮೂಲಕ ಮೂರು ತಾಲೂಕುಗಳೊಂದಿಗೆ ರಾಜ್ಯದ ಅತಿ ಚಿಕ್ಕ ಜಿಲ್ಲೆ ಎನಿಸಿದ್ದ ಉಡುಪಿ, ಇದೀಗ ಆರು ತಾಲೂಕುಗಳನ್ನು ಹೊಂದಿದಂತಾಗಿದೆ. ಈ ಮದ್ಯೆ ಹೆಬ್ರಿ ತಾಲೂಕು ಸ್ಥಾನಮಾನಕ್ಕಾಗಿ ಕಳೆದ 10-15 ವರ್ಷಗಳಿಂದ ಜೋರಾದ ಕೂಗು ಕೇಳುತ್ತಿದೆ. ಹೆಬ್ರಿಯನ್ನು ಹಿಂದಿಕ್ಕಿ ಕಾಪು ತಾಲೂಕು ಸ್ಥಾನಮಾನ ಪಡೆದ ನಂತರ ಹೆಬ್ರಿಯ ಕೂಗು ಜೋರಾಗಿ ಕೇಳುವ ಸಾಧ್ಯತೆ ಇದೆ. ಇದರೊಂದಿಗೆ ಶಂಕರನಾರಾಯಣ ತಾಲೂಕು ಬೇಡಿಕೆಯೂ ಪ್ರಬಲಗೊಳ್ಳಬಹುದು.







