ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ ವಿರೋಧಿಸಿ ತಿಂಗಳಿಗೊಂದು ದಿನ ಕಪ್ಪು ದಿನಾಚರಣೆ : ಮಾಯಾವತಿ

ಲಕ್ನೊ, ಮಾ.15: ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಮತಯಂತ್ರಗಳಲ್ಲಿ ಹಸ್ತಕ್ಷೇಪ ನಡೆಸಿದೆ ಎಂಬ ಆರೋಪವನ್ನು ಪುನರುಚ್ಚರಿಸಿರುವ ಬಿಎಸ್ಪಿ ನಾಯಕಿ ಮಾಯಾವತಿ, ಇದನ್ನು ಪ್ರಶ್ನಿಸಿ ಕೋರ್ಟಿನಲ್ಲಿ ಅರ್ಜಿ ದಾಖಲಿಸಲಾಗುವುದು ಎಂದಿದ್ದಾರೆ.
ಅಲ್ಲದೆ, ಬಿಜೆಪಿಯು ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿರುವುದನ್ನು ವಿರೋಧಿಸಿ ತಿಂಗಳಿಗೆ ಒಂದು ದಿನವನ್ನು ಕಪ್ಪು ದಿನವನ್ನಾಗಿ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ವಂಚನೆ ಮತ್ತು ಮೋಸದ ತಂತ್ರದಿಂದ ಗೆಲುವು ಸಾಧಿಸಿದೆ ಎಂದು ಆರೋಪಿಸಿದರು.
ನಮ್ಮ ದೂರಿನ ಬಗ್ಗೆ ಚುನಾವಣಾ ಆಯೋಗದಿಂದ ಸಮರ್ಪಕ ಉತ್ತರ ದೊರೆಯದಿರುವ ಕಾರಣ ಪಕ್ಷವು ಈ ವಿಷಯವನ್ನು ಕೋರ್ಟಿನೆದುರು ಒಯ್ಯಲು ನಿರ್ಧರಿಸಿದೆ. ಈ ದೇಶವನ್ನು ವಂಚನೆ ಮತ್ತು ಮೋಸದಿಂದ ರಕ್ಷಿಸುವುದು ಮತ್ತು ಪ್ರಜಾಪ್ರಭುತ್ವದ ರಕ್ಷಣೆ ನಮ್ಮ ಉದ್ದೇಶವಾಗಿದೆ ಎಂದು ಮಾಯಾವತಿ ತಿಳಿಸಿದರು. ಚುನಾವಣೆಯಲ್ಲಿ ಪಕ್ಷದ ಸಾಧನೆಯ ಪರಾಮರ್ಶೆ ನಡೆಸಲು ಕರೆಯಲಾಗಿದ್ದ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಬಿಜೆಪಿಯ ವಂಚನೆಯನ್ನು ಬಹಿರಂಗಗೊಳಿಸುವ ಉದ್ದೇಶದಿಂದ ನಮ್ಮ ಪಕ್ಷವು ಉತ್ತರಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಅಭಿಯಾನ ನಡೆಸಲಿದೆ. ಉತ್ತರಪ್ರದೇಶದ ಜಿಲ್ಲಾಕೇಂದ್ರಗಳಲ್ಲಿ ಮತ್ತು ಇತರ ರಾಜ್ಯಗಳ ರಾಜಧಾನಿಯಲ್ಲಿ ಪ್ರತೀ ತಿಂಗಳ 11ನೇ ತಾರೀಕಿನಂದು ಕಪ್ಪು ದಿನಾಚರಣೆ ಹಮ್ಮಿಕೊಳ್ಳಲಾಗುತ್ತದೆ. ಪ್ರಜಾಪ್ರಭುತ್ವದ ಕಗ್ಗೊಲೆಯಾದ 11ನೇ ತಾರೀಖಿನಂದೇ ಇದನ್ನು ನಡೆಸಲಾಗುತ್ತಿದ್ದು ಎಪ್ರಿಲ್ 11ರಂದು ಆರಂಭಿಸಲಾಗುವುದು ಎಂದವರು ತಿಳಿಸಿದರು.
ಉ.ಪ್ರದೇಶದಲ್ಲಿ ಮತಯಂತ್ರಗಳಲ್ಲಿ ಹಸ್ತಕ್ಷೇಪ ನಡೆಸಿರುವ ಬಿಜೆಪಿ ಈಗ ತನ್ನ ಮುಖಮುಚ್ಚಿಕೊಳ್ಳಲು ಯತ್ನಿಸುತ್ತಿದೆ. ಮತಯಂತ್ರದಲ್ಲಿ ಹಸ್ತಕ್ಷೇಪ ನಡೆಸುವುದಾದರೆ ಪಂಜಾಬ್ ಮತ್ತು ಗೋವಾದಲ್ಲೂ ಪಕ್ಷಕ್ಕೆ ಭರ್ಜರಿ ಜಯ ಸಿಗಬೇಕಿತ್ತು ಎಂದು ಹೇಳುತ್ತಿದೆ. ಆದರೆ ಸಣ್ಣ ರಾಜ್ಯಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರದ ಬಿಜೆಪಿ, ಉ.ಪ್ರದೇಶದಂತಹ ಪ್ರಮುಖ ರಾಜ್ಯದ ಬಗ್ಗೆ ಗಮನ ಕೇಂದ್ರೀಕರಿಸಿದೆ ಎಂದ ಅವರು, ಮಾಧ್ಯಮಗಳು ಪ್ರಾಮಾಣಿಕವಾಗಿದ್ದರೆ ಬಿಜೆಪಿಯ ವಂಚನೆಯನ್ನು ಅರಗಿಸಿಕೊಳ್ಳವು ಎಂದರು.
ಈ ಹಿಂದಿನ ವಿಧಾನಸಭೆಯಲ್ಲಿ 80 ಶಾಸಕರನ್ನು ಹೊಂದಿದ್ದ ಬಿಎಸ್ಪಿ ಈ ಬಾರಿಯ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಮಾತ್ರ ಶಕ್ತವಾಗಿತ್ತು.