ಸರಣಿ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ
ಕುಶಾಲನಗರ, ಮಾ.15: ಸಮೀಪದ ಆನೆಕಾಡು ರಾಜ್ಯ ಹೆದ್ದಾರಿಯಲ್ಲಿ ಮಧ್ಯರಾತ್ರಿ 1 ಗಂಟೆ ಸಂದರ್ಭದಲ್ಲಿ ಸರಣಿ ಅಪಘಾತ ನಡೆದಿರುವುದಾಗಿ ವರದಿಯಾಗಿದೆ.
ಕೇರಳ ಮೂಲದ ಪ್ರವಾಸಿಗರು ಮಡಿಕೇರಿಯಿಂದ ಕುಶಾಲನಗರದ ಕಡೆಗೆ ಬರುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಡಿಕೇರಿಯಿಂದ ಅತಿವೇಗವಾಗಿ ಬರುತ್ತಿದ್ದ ಇನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮುಂದೆ ಸಾಗುತ್ತಿದ್ದ, ಮಾರುತಿ ರಿಡ್ಝ್‌ಗೆ ಢಿಕ್ಕಿ ಹೊಡೆದು,ನಂತರ ದ್ವಿ-ಚಕ್ರವಾಹನಕ್ಕೆ ಢಿಕ್ಕಿ ಹೊಡೆದಿದೆ. ಬೈಕಿನಲ್ಲಿದ ಇಬ್ಬರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಇವರಿಗೆ ತಕ್ಷಣ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆಂದು ತಿಳಿದುಬಂದಿದೆ.
ಗಾಯಗೊಂಡ ಬೈಕ್ ಸವಾರ ಮಾದಪಟ್ಟಣದ ನಿವಾಸಿಯಾದ ಶಿವಣ್ಣ ಹಾಗೂ ಬಸವನಹಳ್ಳಿ ನಿವಾಸಿ ಕೃಷ್ಣಪ್ಪಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕುಶಾಲನಗರ ಸಂಚಾರಿ ಠಾಣೆಯ ಎಎಸ್ಸೈ ರವಿ ಸ್ಥಳ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.





