ಬೆಳೆ ಹಾನಿಗೀಡಾದ ರೈತರಿಗೆ 6.22 ಕೋಟಿ ರೂ. ಇನ್‌ಪುಟ್ ಸಬ್ಸಿಡಿ
ಕಾರವಾರ, ಮಾ.15: ಮುಂಗಾರು ಮಳೆ ಕೊರತೆಯಿಂದಾಗಿ ಬೆಳೆ ಹಾನಿಗೀಡಾದ ಜಿಲ್ಲೆಯ 14194 ರೈತರ ಬ್ಯಾಂಕ್ ಖಾತೆಗೆ 6.22 ಕೋಟಿ ರೂ. ಇನ್‌ಪುಟ್ ಸಬ್ಸಿಡಿ ಹಣವನ್ನು ಸರಕಾರ ಜಮಾ ಮಾಡಿದೆ.
ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆ ಹೊಂದಾಣಿಕೆ ಮಾಡಿರುವ ಎಲ್ಲಾ ರೈತರ ಖಾತೆಗಳಿಗೆ ಇನ್‌ಪುಟ್ ಸಬ್ಸಿಡಿ ಬಿಡುಗಡೆ ಮಾಡಲಾಗಿದ್ದು, ಎಲ್ಲಾ ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಹೊಂದಾಣಿಕೆ ಮಾಡುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಕೋರಿದ್ದಾರೆ.
ಹಳಿಯಾಳ ತಾಲೂಕಿನ 4,762 ರೈತರಿಗೆ 250.53ಲಕ್ಷ ರೂ, ಸಿದ್ದಾಪುರ ತಾಲೂಕಿನ 3,727 ರೈತರಿಗೆ 128.49 ಲಕ್ಷ ರೂ, ಮುಂಡಗೋಡ ತಾಲೂಕಿನ 3,934 ರೈತರಿಗೆ 169.59 ಲಕ್ಷ ರೂ ಹಾಗೂ ಯಲ್ಲಾಪುರ ತಾಲೂಕಿನ 1,771 ರೈತರಿಗೆ 73.39ಲಕ್ಷ ರೂ. ಸಬ್ಸಿಡಿ ಅನುದಾನ ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯ 4 ತಾಲೂಕುಗಳ ಇನ್ನೂ 17,001 ರೈತರಿಗೆ ಒಟ್ಟು 1370.30ಲಕ್ಷ ರೂ. ಇನ್‌ಪುಟ್ ಸಬ್ಸಿಡಿ ನೀಡಬೇಕಾಗಿದ್ದು, ಆದಷ್ಟು ಬೇಗನೆ ಬ್ಯಾಂಕ್ ಖಾತೆಯೊಂದಿಗೆ ಆಧಾರ್‌ಸಂಖ್ಯೆಯನ್ನು ಜೋಡಣೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
2016-27ನೆ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಳಿಯಾಳ ತಾಲೂಕಿನ 10,139 ಹೆಕ್ಟೇರ್, ಸಿದ್ದಾಪುರ ತಾಲೂಕಿನ 5909, ಮುಂಡಗೋಡದ 9 ಸಾವಿರ, ಹಾಗೂ ಯಲ್ಲಾಪುರ ತಾಲೂಕಿನ 4,250 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿತ್ತು. ಇದರಿಂದಾಗಿ 31,195 ರೈತರಿಗೆ 1992.30 ಲಕ್ಷ ರೂ. ಇನ್‌ಪುಟ್ ಸಬ್ಸಿಡಿ ಒದಗಿಸಲು ಸಮೀಕ್ಷೆ ನಡೆಸಲಾಗಿತ್ತು.







