ಜಾರ್ಖಂಡ್,ಬಂಗಾಳ ಸೆಮಿಫೈನಲ್‌ಗೆ
ವಿಜಯ್ ಹಝಾರೆ ಟ್ರೋಫಿ

ಹೊಸದಿಲ್ಲಿ, ಮಾ.15: ವಿದರ್ಭ ವಿರುದ್ಧ ಆರು ವಿಕೆಟ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿರುವ ಎಂ.ಎಸ್. ಧೋನಿ ನೇತೃತ್ವದ ಜಾರ್ಖಂಡ್ ತಂಡ ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ನಾಲ್ಕನೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರದ ವಿರುದ್ಧ ಕೊನೆಯ ಎಸೆತದಲ್ಲಿ ಜಯ ಸಾಧಿಸಿರುವ ಬಂಗಾಳ ಸೆಮಿಫೈನಲ್‌ಗೆ ತಲುಪಿದ್ದು, ಶುಕ್ರವಾರ ನಡೆಯಲಿರುವ ಅಂತಿಮ ನಾಲ್ಕರ ಪಂದ್ಯದಲ್ಲಿ ಜಾರ್ಖಂಡ್ ತಂಡವನ್ನು ಎದುರಿಸಲಿದೆ.
ಬುಧವಾರ ಇಲ್ಲಿನ ಪಾಲಂ ಮೈದಾನದಲ್ಲಿ ನಡೆದ 3ನೆ ಕ್ವಾರ್ಟರ್‌ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿದರ್ಭ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲ್ಲಲು ಸುಲಭ ಸವಾಲು ಪಡೆದ ಜಾರ್ಖಂಡ್‌ಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಪ್ರತ್ಯುಷ್ ಸಿಂಗ್(33) ಹಾಗೂ ಇಶಾನ್ ಕಿಶನ್(35) ಉತ್ತಮ ಆರಂಭ ಒದಗಿಸಿದರು.
ಧೋನಿ(ಅಜೇಯ 18) ಹಾಗೂ ಇಶಾಂಕ್ ಜಗ್ಗಿ(ಅಜೇಯ 41) 45.1 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗಣೇಶ್ ಸತೀಶ್ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಧೋನಿ ಜಾರ್ಖಂಡ್‌ಗೆ ಭರ್ಜರಿ ಜಯ ತಂದರು.
ಜಾರ್ಖಂಡ್ ತಂಡವನ್ನು ಧೋನಿ ನಾಯಕನಾಗಿ ಮುನ್ನಡೆಸುತ್ತಿದ್ದ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆದ ಈಪಂದ್ಯ ವೀಕ್ಷಿಲು ಸಾಕಷ್ಟು ಪ್ರೇಕ್ಷಕರು ಆಗಮಿಸಿದ್ದರು. ಇಲ್ಲಿನ ಮಂದಗತಿಯ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಟ ನಡೆಸಿದರು. ಮೊದಲು ಬ್ಯಾಟಿಂಗ್ ಮಾಡಿದ್ದ ವಿದರ್ಭ ತಂಡ ಒಂದು ಹಂತದಲ್ಲಿ 87 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಹೋರಾಟಕಾರಿ ಪ್ರದರ್ಶನ ನೀಡಿದ ರವಿ ಜಾಂಗಿಡ್(62 ರನ್) ಹಾಗೂ ಗಣೇಶ್ ಸತೀಶ್(35) ತಂಡದ ಮೊತ್ತವನ್ನು 159 ರನ್‌ಗೆ ತಲುಪಿಸಿದರು.
ಗೆಲ್ಲಲು 160 ರನ್ ಗುರಿ ಪಡೆದಿದ್ದ ಜಾರ್ಖಂಡ್ ಒಂದು ಹಂತದಲ್ಲಿ 116 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ತಂಡಕ್ಕೆ ಸೆಮಿಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು 44 ರನ್ ಅಗತ್ಯವಿತ್ತು. ಆಗ ಬ್ಯಾಟಿಂಗ್‌ಗೆ ಇಳಿದ ಧೋನಿ ಅನುಭವಿ ಆಟಗಾರ ಜಗ್ಗಿಯೊಂದಿಗೆ 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 49 ರನ್ ಸೇರಿಸಿ 29 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಸುಲಭ ಗೆಲುವು ತಂದರು.
ಆಮಿರ್ ಗನಿ ಸಾಹಸ, ಬಂಗಾಳಕ್ಕೆ ರೋಚಕ ಜಯ
ಹೊಸದಿಲ್ಲಿ, ಮಾ.15: ಮಹಾರಾಷ್ಟ್ರದ ವಿರುದ್ಧ ನಡೆದ ವಿಜಯ್ ಹಝಾರೆ ಟ್ರೋಫಿಯ ನಾಲ್ಕನೆ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬಂಗಾಳ 4 ವಿಕೆಟ್‌ಗಳ ಅಂತರದ ರೋಚಕ ಜಯ ಸಾಧಿಸಿತು.
ಬಂಗಾಳದ ಗೆಲುವಿಗೆ ಅಂತಿಮ 3 ಎಸೆತಗಳಲ್ಲಿ 3 ರನ್ ಅಗತ್ಯವಿತ್ತು. ಕಾಝಿ ಎಸೆದ ಇನಿಂಗ್ಸ್‌ನ ಅಂತಿಮ ಓವರ್‌ನ 5ನೆ ಎಸೆತದಲ್ಲಿ ಬೌಂಡರಿ ಬಾರಿಸಿದ ಬಾಲಂಗೋಚಿ ಆಮಿರ್ ಗನಿ ತಂಡಕ್ಕೆ ಒಂದು ಎಸೆತ ಬಾಕಿ ಇರುವಾಗಲೇ ಗೆಲುವು ತಂದರು.
ಗೆಲ್ಲಲು 319 ರನ್ ಗುರಿ ಪಡೆದಿದ್ದ ಬಂಗಾಳಕ್ಕೆ ಅಗ್ರ ಸರದಿ ದಾಂಡಿಗರಾದ ಶ್ರೀವಾಸ್ತವ ಗೋಸ್ವಾಮಿ(74 ರನ್, 88 ಎಸೆತ),ಅನುಸ್ತೂಪ್ ಮಜುಂದಾರ್(66 ರನ್, 59 ಎಸೆತ) ಹಾಗೂ ಸುದೀಪ್ ಚಟರ್ಜಿ(ಅಜೇಯ 60, 51 ಎಸೆತ) ಅರ್ಧಶತಕದ ಕೊಡುಗೆ ನೀಡಿದ್ದರು. ಆದರೆ, ಗನಿ ಬಂಗಾಳದ ಪರ ಗೆಲುವಿನ ರನ್ ಬಾರಿಸಿ ಗಮನ ಸೆಳೆದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಮಹಾರಾಷ್ಟ್ರ ತಂಡದ ಪರ ರಾಹುಲ್ ತ್ರಿಪಾಠಿ(95 ರನ್,74 ಎಸೆತ) ಹಾಗೂ ನಿಖಿಲ್ ನಾಯಕ್(63 ರನ್,52 ಎಸೆತ) ಅಂತಿಮ 10 ಓವರ್‌ಗಳಲ್ಲಿ 109 ರನ್ ಕಲೆ ಹಾಕಿ ಮಹಾರಾಷ್ಟ್ರ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 318 ರನ್ ಗಳಿಸಲು ನೆರವಾಗಿದ್ದರು.
ಬಿಗಿ ಬೌಲಿಂಗ್ ಮಾಡಿದ ಮಹಾರಾಷ್ಟ್ರದ ಬೌಲರ್‌ಗಳು ಬಂಗಾಳಕ್ಕೆ ಕಠಿಣ ಹೋರಾಟ ನೀಡಿದರು. ಶ್ರೀಕಾಂತ್ 49ನೆ ಓವರ್‌ನಲ್ಲಿ ಮುಜುಂದರ್ ವಿಕೆಟ್‌ನ್ನು ಕಬಳಿಸಿದಾಗ ಬಂಗಾಳದ ಗೆಲುವಿಗೆ 10 ಎಸೆತಗಳಲ್ಲಿ 15 ರನ್ ಅಗತ್ಯವಿತ್ತು. ಅಜೇಯ ಅರ್ಧಶತಕ ಬಾರಿಸಿದ ಸುದೀಪ್ ಚಟರ್ಜಿ ಹಾಗೂ ಗನಿ(ಅಜೇಯ 6) 49.5 ಓವರ್‌ಗಳಲ್ಲಿ ಬಂಗಾಳಕ್ಕೆ ಗೆಲುವು ತಂದುಕೊಟ್ಟರು.







