ಕಾಶ್ಮೀರ: ಗುಂಡಿಗೆ ಆರು ವರ್ಷದ ಬಾಲೆ ಬಲಿ

ಶ್ರೀನಗರ, ಮಾ.16: ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿ ವೇಳೆ ಗುಂಡು ತಾಗಿ ಆರು ವರ್ಷದ ಬಾಲಕಿಯೊಬ್ಬಳು ಮೃತಪಟ್ಟು, ಆಕೆಯ ಏಳು ವರ್ಷದ ಅಣ್ಣ ಗಂಭೀರವಾಗಿ ಗಾಯಗೊಂಡ ಹೃದಯ ವಿದ್ರಾವಕ ಘಟನೆ ಬುಧವಾರ ಕುಪ್ವಾರ ಜಿಲ್ಲೆ ಹೈಹಮಾ ಗ್ರಾಮದಲ್ಲಿ ನಡೆದಿದೆ.
ಗುಂಡಿನ ಚಕಮಕಿಯಲ್ಲಿ ಮೂರು ಮಂದಿ ಲಷ್ಕರ್ ಇ ತೋಯ್ಬ ಕಾರ್ಯಕರ್ತರು ಮೃತಪಟ್ಟಿದ್ದಾರೆ. ಒಬ್ಬ ಪೊಲೀಸ್ ಕಾನ್‌ಸ್ಟೇಬಲ್ ಗಾಯಗೊಂಡಿದ್ದಾನೆ.
41 ರಾಷ್ಟ್ರೀಯ ರೈಫಲ್ ಸಹೋದರರು ಹಾಗೂ ಜಮ್ಮು- ಕಾಶ್ಮೀರ ವಿಶೇಷ ಕಾರ್ಯಾಚರಣೆ ಪಡೆ ಯೋಧರು ಶೋಧ ಕಾರ್ಯಾಚರಣೆ ನಡೆಸುವ ವೇಳೆ ಈ ಚಕಮಕಿ ನಡೆಯಿತು ಎಂದು ಪೊಲೀಸ್ ಮೂಲಗಳು ಹೇಳಿವೆ.
ವಾಸ್ತವ ನಿಯಂತ್ರಣ ರೇಖೆಯಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ದಟ್ಟ ಕಾಡಿನಲ್ಲಿ ಈ ಘಟನೆ ನಡೆದಿದೆ. ಭದ್ರತಾ ಪಡೆ ಯೋಧರು ಒಂದು ಮನೆ ಮೇಲೆ ದಾಳಿ ನಡೆಸಲು ಮುಂದಾದಾಗ ಯೋಧರತ್ತ ಉಗ್ರರು ಗುಂಡುಹಾರಿಸಲು ಆರಂಭಿಸಿದರು. ಹೀಗೆ ಹಾರಿದ ಗುಂಡು ಪಕ್ಕದಲ್ಲಿದ್ದ ಆರು ವರ್ಷದ ಬಾಲಕಿ ಖನೀಝಾ ಎಂಬಾಕೆಗೆ ತಗುಲಿ ಆಕೆ ಸ್ಥಳದಲ್ಲೇ ಮೃತಪಟ್ಟಳು. ಆಕೆಯ ಅಣ್ಣ ಫೈಸಲ್ ಗಾಯಗೊಂಡಿದ್ದಾನೆ.
ಡ್ಯಾನಿಶ್ ಅಹ್ಮದ್ ಎಂಬ ಪೊಲೀಸ್ ಪೇದೆಯೂ ಘಟನೆಯಲ್ಲಿ ಗಾಯಗೊಂಡಿದ್ದಾನೆ ಎಂದು ಕುಪ್ವಾರ ಹೆಚ್ಚುವರಿ ಎಸ್ಪಿ ಹೇಳಿದ್ದಾರೆ. ಘಟನೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ ಎಂದು ಡಿಜಿಪಿ ಜಾವೇದ್ ಮುಜ್ತಾಬಾ ಗೀಲಾನಿ ಹೇಳಿದ್ದಾರೆ.
ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ಮೂಲಗಳು ಹೇಳಿವೆ. ಮಗುವಿನ ಸಾವಿಗೆ ಇಡೀ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.







