ಮನೆ ಖರೀದಿಸುವ ಉದ್ಯೋಗಿಗಳಿಗೆ ಸಿಹಿಸುದ್ದಿ
ವಿವರಗಳಿಗೆ ಕ್ಲಿಕ್ ಮಾಡಿ

ಹೊಸದಿಲ್ಲಿ, ಮಾ.16: ಉದ್ಯೋಗಿ ಭವಿಷ್ಯನಿಧಿ ಯೋಜನೆಗೆ ತಿದ್ದುಪಡಿ ತಂದು ಮನೆಖರೀದಿಗೆ ಇಪಿಎಫ್‌ನ ಶೇಕಡ 90ರಷ್ಟು ನಿಧಿಯನ್ನು ಪಡೆಯಲು ಅವಕಾಶ ಮಾಡಿಕೊಡಲು ಕೇಂದ್ರ ಸರಕಾರ ನಿರ್ಧರಿಸಿದೆ.
ಇದರಿಂದ ಸುಮಾರು ನಾಲ್ಕು ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಬುಧವಾರ ಸಂಸತ್ತಿಗೆ ತಿಳಿಸಲಾಯಿತು. ಉದ್ಯೋಗಿ ಭವಿಷ್ಯನಿಧಿ ಸದಸ್ಯರು ತಮ್ಮ ಇಪಿಎಫ್ ಖಾತೆಯನ್ನು ಗೃಹಸಾಲದ ಮಾಸಿಕ ಕಂತು ಪಾವತಿಗೆ ಕೂಡಾ ಬಳಸಿಕೊಳ್ಳಲು ಅನುಮತಿ ನೀಡಲಾಗುತ್ತಿದೆ. ಹೊಸ ಇಪಿಎಫ್ ಯೋಜನೆ ಅನ್ವಯ ಸದಸ್ಯರು ಈ ಸೌಲಭ್ಯ ಪಡೆಯಲು 10 ಮಂದಿ ಸದಸ್ಯರ ಹೊಸ ಸಹಕಾರ ಸಂಘ ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಇಪಿಎಫ್ ಯೋಜನೆ ಕಾಯ್ದೆ- 1952ಕ್ಕೆ ತಿದ್ದುಪಡಿ ತಂದು ಹೊಸದಾಗಿ 68 ಬಿ.ಡಿ. ವಿಧಿ ಸೇರಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇಪಿಎಫ್ ಸದಸ್ಯರಾಗಿರುವ ಉದ್ಯೋಗಿಗಳು ಯಾವುದೇ ಸಹಕಾರ ಸಂಘದ ಅಥವಾ ಕನಿಷ್ಠ 10 ಮಂದಿ ಇಪಿಎಫ್ ಸದಸ್ಯರನ್ನು ಹೊಂದಿರುವ ಗೃಹನಿರ್ಮಾಣ ಸಹಕಾರ ಸಂಘದ ಸದಸ್ಯತ್ವ ಪಡೆದಿದ್ದರೆ, ಅಂಥ ಉದ್ಯೋಗಿಗಳು ಮನೆ ಖರೀದಿಗೆ ಶೇಕಡ 90ರಷ್ಟು ಹಣವನ್ನು ತಮ್ಮ ಖಾತೆಯಿಂದ ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ. ವಾಸದ ಮನೆಗಳ/ ಫ್ಲಾಟ್ ಖರೀದಿ, ಮನೆ ನಿರ್ಮಾಣ ಅಥವಾ ನಿವೇಶನ ಖರೀದಿಗೂ ಇದು ಅನ್ವಯಿಸುತ್ತದೆ.





