ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಮಾಲಕನಾದ ರೈತ !
ಆತ ಅದನ್ನು ಮಾಡಿದ್ದೇನು?

ಲುಧಿಯಾನ, ಮಾ.16: ಉತ್ತರ ರೈಲ್ವೆ ಸ್ವಾಧೀನ ಪಡಿಸಿದ ತನ್ನ ಭೂಮಿಗೆ ಸೂಕ್ತ ಪರಿಹಾರವೊದಗಿಸದೇ ಇರುವ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದ ಲುಧಿಯಾನದ 45 ವರ್ಷದ ರೈತನೊಬ್ಬನಿಗೆ ಬುಧವಾರದಂದು ನ್ಯಾಯಾಲಯ ತನ್ನ ಆದೇಶವೊಂದರಲ್ಲಿ ಅಮೃತಸರ್ ಮತ್ತು ನವದೆಹಲಿ ನಡುವೆ ಸಂಚರಿಸುವ ಸ್ವರ್ಣ ಶತಾಬ್ದಿ ರೈಲನ್ನೇ ನೀಡಿ ಆತನನ್ನು ರೈಲಿನ ಮಾಲಕನನ್ನಾಗಿಸಿತು.
ಅಭೂತಪೂರ್ವ ತೀರ್ಪೊಂದರಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಸ್ಪಾಲ್ ವರ್ಮ ಬುಧವಾರ ಈ ರೈಲನ್ನು (12030) ಲುಧಿಯಾನ ರೈಲು ನಿಲ್ದಾಣದಲ್ಲಿ ವಶಪಡಿಸಿಕೊಳ್ಳುವ ಆದೇಶ ನೀಡಿ ಅದನ್ನು ತಾಂತ್ರಿಕವಾಗಿ ರೈತನಿಗೆ ಹಸ್ತಾಂತರಿಸಿದರು.
ಕಾರಣ- 2015ರಲ್ಲಿ ನ್ಯಾಯಾಲಯದ ಆದೇಶದಂತೆ ರೈಲ್ವೇ ಇಲಾಖೆಯು ರೈತನಿಗೆ ಹೆಚ್ಚುವರಿ ಪರಿಹಾರ ಮೊತ್ತವಾದ ರೂ 1.05 ಕೋಟಿ ನೀಡಿರಲಿಲ್ಲ. ತನ್ನ ಆದೇಶದಲ್ಲಿ ನ್ಯಾಯಾಲಯವು ಸ್ಟೇಶನ್ ಮಾಸ್ಟರ್ ಅವರ ಕಚೇರಿಯನ್ನೂ ವಶಪಡಿಸಿಕೊಳ್ಳಲು ತಿಳಿಸಿತು.
ಆದರೆ ಈ 300 ಮೀಟರ್ ಉದ್ದದ ರೈಲನ್ನು ಕತನ ಗ್ರಾಮದ ರೈತ ಸಂಪೂರಣ್ ಸಿಂಗ್ ಹೇಗಪ್ಪಾ ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯ ?
ಆದರೆ ನ್ಯಾಯಾಲಯದ ಆದೇಶ ಪಾಲಿಸುವ ಸಲುವಾಗಿ ಸಂಪೂರಣ್ ತಮ್ಮ ನ್ಯಾಯವಾದಿ ರಾಕೇಶ್ ಗಾಂಧಿ ಜತೆಗೂಡಿ ಲುಧಿಯಾನ ರೈಲು ನಿಲ್ದಾಣಕ್ಕೆ ತೆರಳಿ ಕೋರ್ಟ್ ಆದೇಶದ ಪ್ರತಿಯನ್ನು ರೈಲಿನ ಡ್ರೈವರಿಗೆ ಹಸ್ತಾಂತರಿಸಿದರು. ನಂತರ ಸೆಕ್ಷನ್ ಇಂಜಿನಿಯರ್ ರೈಲನ್ನು ಕೋರ್ಟ್ ಅಧಿಕಾರಿಯೊಬ್ಬರ ಸುಪರ್ದಿಯೊಂದಿಗೆ ಬಿಡುಗಡೆ ಮಾಡಿದರೂ ಇದೀಗ ರೈಲು ನ್ಯಾಯಾಲಯದ ಆಸ್ತಿಯಾಗಿದೆ. ರೈಲನ್ನು ನಿಲ್ಲಿಸಿದರೆ ಅದರ ಪ್ರಯಾಣಿಕರಿಗೆ ತೊಂದರೆಯಾಗುವುದರಿಂದ ಹಾಗೆ ಮಾಡಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಲುಧಿಯಾನ-ಚಂಡೀಗಢ ರೈಲು ಮಾರ್ಗದ ಅಭಿವೃದ್ಧಿಗಾಗಿ 2007ರಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅಂದು ಪರಿಹಾರ ಮೊತ್ತವನ್ನು ಪ್ರತಿ ಎಕರೆಗೆ ರೂ. 25 ಲಕ್ಷ ನಿಗದಿ ಪಡಿಸಲಾಗಿದ್ದರೂ ನಂತರ ಅದನ್ನು ರೂ.50 ಲಕ್ಷಕ್ಕೆ ಏರಿಸಲಾಗಿತ್ತು. ಅದರಂತೆ ಸಂಪೂರಣ್ ಗೆ ರೂ. 1.47 ಕೋಟಿ ಪರಿಹಾರ ದೊರೆಯಬೇಕಿದ್ದರೂ ದಕ್ಕಿದ್ದು ಕೇವಲ ರೂ. 42 ಲಕ್ಷ ಆಗಿತ್ತು. ಅವರಿಗೆ ಬಾಕಿ ಮೊತ್ತ ಪಾವತಿಸುವಂತೆ ನ್ಯಾಯಾಲಯ ಜನವರಿ 2015ರಲ್ಲಿ ಆದೇಶಿಸಿದ್ದರೂ ಪರಿಹಾರ ದೊರೆಯದೇ ಇದ್ದುದರಿಂದ ಇದೀಗ ನ್ಯಾಯಾಲಯ ರೈಲನ್ನೇ ಜಪ್ತಿಗೊಳಿಸಿದೆ.







