ಕಾಸರಗೋಡಿನಲ್ಲಿ 1.6 ಟನ್ ‘ಕಾರ್ಬೈಡ್’ ಮಾವಿನ ಹಣ್ಣು ವಶ !

ಕಾಸರಗೋಡು, ಮಾ. 16: ಅಂಗಡಿಗಳಲ್ಲಿ ಮಾರಲು ತರಲಾದ ಮಾರಕ ರಾಸಾಯನಿಕ ಕಾರ್ಬೈಡ್ ಉಪಯೋಗಿಸಿ ಹಣ್ಣುಮಾಡಿದ 1600ಕಿಲೊ ಮಾವಿನ ಹಣ್ಣನ್ನು ನೆಲ್ಲಿಕಟ್ಟೆ ಪೈಕದ ವ್ಯಾಪಾರಿಯ ಮನೆಯಿಂದ ಆಹಾರ ಭದ್ರತಾ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪೈಕ ಜುನೈದ್ ಎಂಬಾತನ ಮನೆಯಿಂದ ಕೃತಕವಾಗಿ ಹಣ್ಣು ಮಾಡಿದ ವಿಷಯುಕ್ತ ಮಾವಿನ ಹಣ್ಣನ್ನು ವಶಕ್ಕೆ ಪಡೆಯಲಾಗಿದ್ದು. ಇದು 1.50ಲಕ್ಷ ರೂಪಾಯಿ ಮೌಲ್ಯದ ಹಣ್ಣುಗಳು ಎನ್ನಲಾಗಿದೆ. ಜುನೈದ್ ಕಾಸರಗೋಡಿನಿಂದ ಮಂಗಳೂರುವರೆಗೆ ಮಾವಿನ ಹಣ್ಣು ವಿತರಿಸುವ ವ್ಯಕ್ತಿಯಾಗಿದ್ದಾನೆ ಎಂದು ಆಹಾರ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ಜುನೈದ್ ಮನೆಯಲ್ಲಿ 92 ಫೈಬರ್ ಪೆಟ್ಟಿಗೆಗಳಲ್ಲಿ ಮಾವಿನ ಹಣ್ಣು ಇರಿಸಲಾಗಿತ್ತು. ಪ್ರತಿಯೊಂದು ಪೆಟ್ಟಿಗೆಗೂ ಕ್ಯಾಲ್ಸಿಯಂ ಕಾರ್ಬೈಡ್ ಸಿಂಪಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಚೆಂಗಳ ಪಂಚಾಯತ್‌ನ್ನು ಆಹಾರ ಭದ್ರತಾ ಪಂಚಾಯತ್ ಎಂದು ಘೋಷಿಸುವ ಕಾರ್ಯಕ್ರಮದ ವೇಳೆ ಜುನೈದ್‌ನ ಮಾವಿನ ಹಣ್ಣಿನ ಕೃತಕ ಮಾಗಿಸುವಿಕೆ ಆಹಾರ ಭದ್ರತಾ ಅಧಿಕಾರಿಗಳಿಗೆ ತಿಳಿದು ಬಂದಿತ್ತು. ಈರಹಸ್ಯಮಾಹಿತಿ ಆಧಾರದಲ್ಲಿ ಆಹಾರ ಭದ್ರತಾ ಅಧಿಕಾರಿಗಳು ಜುನೈದ್ ಮನೆಗೆ ದಾಳಿ ಮಾಡಿ ಕಾರ್ಬೈಡ್‌ನಿಂದ ಹಣ್ಣು ಮಾಡಿದ ಮಾವುಗಳನ್ನು ವಶಕ್ಕೆ ಪಡೆದರು.





