ಉತ್ತರ ಪ್ರದೇಶ:ಬಿಜೆಪಿ ಸಂಸದನ ಹೆಸರಲ್ಲಿ ಮುಸ್ಲಿಮರಿಗೆ ಊರು ಬಿಟ್ಟು ಹೋಗಲು ಹೇಳುವ ಪೋಸ್ಟರ್‌ಗಳು ಪ್ರತ್ಯಕ್ಷ

ಬರೇಲಿ,ಮಾ.16: ಇಲ್ಲಿಂದ 70 ಕಿ.ಮೀ.ದೂರದ ಮೀರಗಂಜ್ ತಾಲೂಕಿನ ಜಿಯಾನಾಗ್ಲಾ ಗ್ರಾಮದ ಸುಮಾರು ಎರಡು ಡಜನ್‌ಗೂ ಅಧಿಕ ಸ್ಥಳಗಳಲ್ಲಿ ಮುಸ್ಲಿಮರನ್ನು ತಕ್ಷಣ ಊರು ಬಿಡುವಂತೆ ಆದೇಶಿಸಿರುವ ಪೋಸ್ಟರ್‌ಗಳು ದಿಢೀರ್ ಪ್ರತ್ಯಕ್ಷವಾಗಿದ್ದು, ಈ ವಿದ್ಯಮಾನ ಗ್ರಾಮದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ‘‘ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಅಲ್ಲಿಯ ಮುಸ್ಲಿಮರಿಗೆ ಮಾಡುತ್ತಿರುವುದನ್ನೇ ಈ ಗ್ರಾಮದ ಹಿಂದುಗಳು ಮಾಡಲಿದ್ದಾರೆ ’’ ಎಂದು ಸಾರಿರುವ ಈ ಸಂದೇಶ ಹಿಂದಿಯಲ್ಲಿದೆ.
ಈ ಬೆದರಿಕೆ ಸಂದೇಶದಲ್ಲಿ ಊರು ಬಿಟ್ಟು ಹೋಗಲು ಜಿಯಾನಾಗ್ಲಾದ ಮುಸ್ಲಿಮರಿಗೆ ಈ ವರ್ಷದ ಅಂತ್ಯದವರೆಗೆ ಗಡುವು ವಿಧಿಸಲಾಗಿದೆ. ‘ಗ್ರಾಮದ ಹಿಂಂದುಗಳು’ ಈ ಪೋಸ್ಟರ್‌ಗೆ ಸಹಿ ಮಾಡಿದ್ದು,‘ಪೋಷಕ ’ಎಂದು ಬಿಜೆಪಿ ಸಂಸದನ ಹೆಸರನ್ನು ಕಾಣಿಸಲಾಗಿದೆ.
ಪೊಲೀಸರು ಹೆಚ್ಚಿನ ಸ್ಥಳಗಳಲ್ಲಿಯ ಪೋಸ್ಟರ್‌ಗಳನ್ನು ಕಿತ್ತು ಹಾಕಿದ್ದಾರಾದರೂ ಕೆಲವೆಡೆಗಳಲ್ಲಿ ಇನ್ನೂ ಉಳಿದುಕೊಂಡಿವೆ. ಊರು ಬಿಡದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮುಸ್ಲಿಮರಿಗೆ ಎಚ್ಚರಿಕೆಯನ್ನೂ ಈ ಪೋಸ್ಟರ್‌ನಲ್ಲಿ ನೀಡಲಾಗಿದೆ.
ಗ್ರಾಮಸ್ಥರು ರವಿವಾರ ತಡರಾತ್ರಿಯವರೆಗೂ ಹೋಳಿಯನ್ನು ಆಚರಿಸಿದ್ದರು. ಸೋಮವಾರ ಬೆಳಿಗ್ಗೆ ಈ ಪೋಸ್ಟರ್‌ಗಳು ಪ್ರತ್ಯಕ್ಷವಾಗಿವೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಗ್ರಾಮಪ್ರಧಾನ ರೇವಾ ರಾಮ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಗ್ರಾಮದ ಐವರು ಯುವಕರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಜಿಯಾನಾಗ್ಲಾ ಸುಮಾರು 2,500 ಜನಸಂಖ್ಯೆ ಹೊಂದಿದ್ದು, ಈ ಪೈಕಿ ಸುಮಾರು 200 ಮುಸ್ಲಿಮರಿದ್ದಾರೆ.
ತಲೆಮಾರುಗಳಿಂದಲೂ ಗ್ರಾಮದಲ್ಲಿ ಸೌಹಾರ್ದತೆಯಿಂದ ಬದುಕಿದ್ದೇವೆ. ಈ ಪೋಸ್ಟರ್‌ಗಳನ್ನು ಹಚ್ಚಿದವರು ಯಾರು ಎನ್ನುವುದು ಗೊತ್ತಾಗಿಲ್ಲ ಎಂದು ಗ್ರಾಮದ ನಿವಾಸಿ ರಫೀಕ್ ಹೇಳಿದರು.
ಇಂತಹ ವಿದ್ಯಮಾನ ಈ ಹಿಂದೆಂದೂ ಸಂಭವಿಸಿರಲಿಲ್ಲ. ಅಧಿಕಾರಿಗಳು ನಮಗೆ ಭದ್ರತೆ ಒದಗಿಸುವ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರಾದರೂ ಅಂತಿಮವಾಗಿ ಊರನ್ನು ತೊರೆಯುವುದು ಸೇರಿದಂತೆ ಎಲ್ಲ ಆಯ್ಕೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಇನ್ನೋರ್ವ ನಿವಾಸಿ ತಿಳಿಸಿದ.
ಸಣ್ಣ ಪ್ರಿಂಟಿಂಗ್ ಮತ್ತು ಝೆರಾಕ್ಸ್ ಉದ್ಯಮಗಳನ್ನು ಹೊಂದಿರುವ ಗ್ರಾಮದ ಕೆಲವರನ್ನು ನಾವು ವಿಚಾರಣೆಗೊಳಪಡಿದ್ದೇವೆ, ಆದರೆ ಈವರೆಗೆ ಯಾವುದೇ ಖಚಿತ ಸುಳಿವು ಸಿಕ್ಕಿಲ್ಲ ಎಂದು ಬರೇಲಿ ಎಸ್‌ಪಿ ಯಮುನಾ ಪ್ರಸಾದ್ ತಿಳಿಸಿದರು.







