ಹಿಸ್ಸಾರ್ ತ್ರಿವಳಿ ಕೊಲೆ ಆರೋಪಿ ಡಿಎಸ್‌ಪಿಯಿಂದ ಆತ್ಮಹತ್ಯೆಗೆ ಯತ್ನ

ಪಂಚಕುಲಾ,ಮಾ.16: ಸೋಮವಾರ ಹನ್ಸಿಯಲ್ಲಿ ನಡೆದ ಮೂವರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇಲ್ಲಿಯ ಪೊಲೀಸ್ ಮುಖ್ಯಕಚೇರಿಗೆ ಎತ್ತಂಗಡಿಗೊಂಡಿದ್ದ ಹಿಸ್ಸಾರ್‌ನ ಹಿಂದಿನ ಡಿಎಸ್‌ಪಿ ಭಗವಾನ ದಾಸ್(52) ತನ್ನ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಲ್ಲಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು,ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಹಿಸ್ಸಾರ್ ಜಿಲ್ಲೆಯ ಹನ್ಸಿ ಉಪವಿಭಾಗದ ಶೇಕಪುರಾ ಗ್ರಾಮದಲ್ಲಿ ಓರ್ವ ಬಿಎಸ್‌ಎಫ್ ಯೋಧ ಸೇರಿದಂತೆ ಮೂವರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಲ್ಪಟ್ಟ ಬಳಿಕ ದಾಸ್‌ರನ್ನು ವರ್ಗಾವಣೆಗೊಳಿಸಲಾಗಿದ್ದು, ಮಂಗಳವಾರ ಪಂಚಕುಲಾ ತಲುಪಿದ್ದರು. ಬುಧವಾರ ತಾನು ತಂಗಿದ್ದ ಪೊಲೀಸ್ ಲೈನ್ಸ್‌ನ ವಸತಿಗೃಹದಲ್ಲಿ ತನ್ನ ಬಲಗಣ್ಣಿನ ಬಳಿ ಗುಂಡು ಹಾರಿಸಿಕೊಂಡಿದ್ದು, ಅದು ಅವರ ತಲೆಯ ಮೂಲಕ ಹಾದು ಹೋಗಿತ್ತು.
ರಾಮಕುಮಾರ್,ಮುಕೇಶ ಕುಮಾರ ಮತ್ತು ಪ್ರದೀಪ್ ಕುಮಾರ್ ಅವರ ಹತ್ಯೆ ಆರೋಪದಲ್ಲಿ ದಾಸ್ ಮತ್ತು ಇತರ 23 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಿಎಸ್‌ಎಫ್ ಯೋಧ ಪ್ರದೀಪ್ ಕುಮಾರ್ ಹೋಳಿ ಆಚರಣೆಗೆಂದು ತನ್ನ ಗ್ರಾಮಕ್ಕೆ ಬಂದಿದ್ದರು.
ಪಂಚಾಯತ್ ಚುನಾವಣೆಯಲ್ಲಿ ತನ ಪುತ್ರಿ ಪೂಜಾರಾಣಿ ವಿರುದ್ಧ ಸ್ಪರ್ಧಿಸಿದ್ದ ಗ್ರಾಮದ ಮಾಜಿ ಸರಪಂಚ್ ಬಲ್ಬೀರ್ ಸಿಂಗ್ ಜೊತೆ ದಾಸ್‌ಗೆ ವಿವಾದವಿತ್ತೆನ್ನಲಾಗಿದೆ. ಕೊಲೆಯಾಗಿರುವ ಮೂವರೂ ಬಲ್ಬೀರ್ ಜೊತೆ ನಿಕಟವಾಗಿದ್ದರೆನ್ನಲಾಗಿದೆ.