ಮಾ. 20ರಿಂದ ಮಂಗಳೂರಿಗೆ 36 ಗಂಟೆಗೊಮ್ಮೆ ನೀರು ಸರಬರಾಜು..!
ಯಾಕೆ..? ಇಲ್ಲಿದೆ ವಿವರ

ಮಂಗಳೂರು, ಮಾ. 16: ನಗರಕ್ಕೆ ನೀರಿನ ಮೂಲವಾಗಿರುವ ತುಂಬೆ ಅಣೆಕಟ್ಟಿನಲ್ಲಿ ನೇತ್ರಾವತಿ ನದಿ ನೀರಿನ ಒಳಹರಿವು ಸ್ಥಗಿತಗೊಂಡಿರುವುದರಿಂದ ಕೊನೆಗೂ ಮಂಗಳೂರು ಮಹಾನಗರ ಪಾಲಿಕೆ ಪೂರೈಕೆಯಲ್ಲಿ ಕಡಿತಕ್ಕೆ ಮುಂದಾಗಿದೆ. ಮಾರ್ಚ್ 20ರಿಂದ ಪ್ರತಿ ಒಂದೂವರೆ ದಿನಕ್ಕೊಮ್ಮೆ(36 ಗಂಟೆ) ನೀರು ಪೂರೈಕೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನೂತನ ಮೇಯರ್ ಕವಿತಾ ಸನಿಲ್, ಪ್ರಸ್ತುತ ತುಂಬೆ ಅಣೆಕಟ್ಟಿನಲ್ಲಿ ಲಭ್ಯವಿರುವ ನೀರನ್ನು ಮೇ ಅಂತ್ಯದವರೆಗೆ ನಗರದ ಜನರಿಗೆ ಪೂರೈಕೆ ಮಾಡುವ ಸಲುವಾಗಿ ಮುಂಜಾಗೃತಾ ಕ್ರಮವಾಗಿ ನೀರು ಪೂರೈಕೆಯಲಿ ಈ ಕಡಿತಕ್ಕೆ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.
ತುಂಬೆಯ ನೂತನ ಅಣೆಕಟ್ಟು ಹಾಗೂ ಎಎಂಆರ್‌ಡ್ಯಾಂನಲ್ಲಿ ನೀರು ಸಂಗ್ರಹ ಸಾಕಷ್ಟಿದೆ. ಎಎಂಆರ್‌ಡ್ಯಾಂನಲ್ಲಿ 6.25 ಮೀಟರ್ ನೀರು ಇದ್ದು, 40 ದಿನಗಳಿಗೆ ನಗರಕ್ಕೆ ಸಾಕಾಗಬಹುದು. ಅಲ್ಲದೆ ತುಂಬೆಯಲ್ಲಿ 4.15 ಮೀಟರ್‌ನಷ್ಟು ನೀರು ಸಂಗ್ರಹವಿದ್ದು 20 ದಿನಕ್ಕೆ ಸಾಕು. ಆದರೆ ನೇತ್ರಾವತಿ ನದಿಯಲ್ಲಿ ಒಳಹರಿವು ಸ್ಥಗಿತಗೊಂಡಿದೆ. ಮುಂಜಾಗರೂಕತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಸುಬ್ರಹ್ಮಣ್ಯ, ಸುಳ್ಯ ಭಾಗಗಳಲ್ಲಿ ಮಳೆ ಬಿದ್ದಿದೆ, ಮಳೆ ಇನ್ನಷ್ಟು ಬಿದ್ದು ಮಾರ್ಚ್ 20ರ ಮೊದಲು ಹರಿವು ಹೆಚ್ಚಿದರೆ ಈ ಆದೇಶ ಹಿಂಪಡೆಯಲಾಗುವುದು ಎಂದು ಅವರು ತಿಳಿಸಿದರು.
ಕಳೆದ ವರ್ಷ ನೀರು ಸ್ಥಗಿತ ಮಾಡುವಾಗ ತಡವಾಗಿತ್ತು, ಹಾಗಾಗಿ ಕೊನೆಯ ಕೆಲ ದಿನಗಳು ನಗರಕ್ಕೆ ನೀರು ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಎದುರಾಗಿತ್ತು. ಹಾಗಾಗಿ ಈ ಬಾರಿ ಸಾಕಷ್ಟು ಮುಂಚಿತವಾಗಿಯೇ ನೀರು ನಿಯಂತ್ರಣ ಮಾಡಲಾಗುತ್ತಿದೆ. ಸದ್ಯಕ್ಕೆ ನಿರ್ಮಾಣ ಹಂತದ ಕಟ್ಟಡಗಳಿಗೆ ನೀರು ಸ್ಥಗಿತಗೊಳಿಸಿಲ್ಲ. ಮುಂದೆ ಅಗತ್ಯವಿದ್ದರೆ ಏಪ್ರಿಲ್ ತಿಂಗಳಿಂದ ಅವರಿಗೂ ನೀರು ಸ್ಥಗಿತಗೊಳಿಸಲಾಗುವುದು ಎಂದರು.
ಕೈಗಾರಿಕೆಗಳಿಗೆ ನೀರು ಕಡಿತ
ಆಯುಕ್ತ ಮಹಮ್ಮದ್ ನಝೀರ್ ಮಾತನಾಡಿ, ಎಎಂಆರ್ ಡ್ಯಾಂನಿಂದ ಎಸ್‌ಇಝಡ್ ಹಾಗೂ ಎಂಆರ್‌ಪಿಎಲ್‌ಗೆ ಪ್ರತೀ ದಿನ 15 ಎಂಜಿಡಿ ನೀರು ತೆಗೆಯಲು ಅನುಮತಿ ಇದ್ದು, ಪ್ರಸ್ತುತ ನೀರಿನ ಕೊರತೆ ಹಿನ್ನೆಲೆಯಲ್ಲಿ ಅದನ್ನು 10 ಎಂಜಿಡಿಗೆ ಕಡಿತಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹೊಸ ಕಟ್ಟಡ ನಿರ್ಮಾಣಕ್ಕೂ ನೀರಿನ ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ನೀರು ಕಡಿತ-ಪೂರೈಕೆ ಈ ರೀತಿ ಇರಲಿದೆ.
1) ಮಾ.20ರ ಸೋಮವಾರದಿಂದ ಬೆಳಗ್ಗೆ 6ರಿಂದ ಮಂಗಳವಾರ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತ.
2) ಮಂಗಳವಾರ ಸಂಜೆ 6ರಿಂದ ಗುರುವಾರ ಸಂಜೆ 6ರವರೆಗೆ ಎಲ್ಲಾ ಬಳಕೆದಾರರಿಗೆ ನೀರು ಪೂರೈಕೆ.
3) ಗುರುವಾರ ಸಂಜೆ 6ರಿಂದ ಶನಿವಾರ ಬೆಳಗ್ಗೆ 6ರವರೆಗೆ ನೀರು ಪೂರೈಕೆ ಸ್ಥಗಿತ.
4) ಶನಿವಾರ ಬೆಳಗ್ಗೆ 6ರಿಂದ ಸೋಮವಾರ ಬೆಳಗ್ಗೆ 6ರವರೆಗೆ ನೀರು ಪೂರೈಕೆ.
ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ರಜನೀಶ್, ಮುಖ್ಯಸಚೇತಕ ಎಂ.ಶಶಿಧರ ಹೆಗ್ಡೆ, ಮಾಜಿ ಮೇಯರ್‌ಗಳಾದ ಹರಿನಾಥ್, ಮಹಾಬಲ ಮಾರ್ಲ, ಸದಸ್ಯೆ ಅಪ್ಪಿ ಉಪಸ್ಥಿತರಿದ್ದರು.







