ಕಾಡುಹಂದಿ ಬೇಟೆಯಾಡಿದ್ದ ಚಿರತೆ ಜನರ ಗದ್ದಲಕ್ಕೆ ಪರಾರಿ...

ಗುಂಡ್ಲುಪೇಟೆ, ಮಾ.16: ಕಾಡುಹಂದಿಯನ್ನುಎತ್ತರದ ಮರದ ಮೇಲೆತ್ತಿಕೊಂಡು ಹೋಗಿ ಭಕ್ಷಣೆಯಲ್ಲಿ ತೊಡಗಿದ್ದ ಚಿರತೆಯು ಜನರ ಗದ್ದಲದಿಂದ ಬೇಟೆಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಸಾರ್ವಜನಿಕರ ಆತಂಕಕ್ಕೆ ಎಡೆ ಮಾಡಿರುವ ಘಟನೆ ತಾಲೂಕಿನ ಲಕ್ಕೂರಿನಲ್ಲಿ ನಡೆದಿದೆ.
ಮಾ.15ರ ರಾತ್ರಿ 10 ಘಂಟೆಯಲ್ಲಿ ಲಕ್ಕೂರು ಗ್ರಾಮದಿಂದ ತಮ್ಮಡಹಳ್ಳಿಗೆ ಹೋಗುವ ಮಾರ್ಗದಲ್ಲಿ ಕರಿಕಲ್ ಬಸವೇಶ್ವರ ದೇವಸ್ಥಾನದ ಸಮೀಪದಲ್ಲಿ ನಂದೀಶ್ ಎಂಬ ರೈತರ ಜಮೀನಿನಲ್ಲಿರುವ ಮರದ ಮೇಲೆ ಚಿರತೆಯೊಂದು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ರೈತರು ಅಕ್ಕಪಕ್ಕದ ಜಮೀನುಗಳ ರೈತರ ನೆರವಿನಿಂದ ಸ್ಥಳಕ್ಕೆ ತೆರಳಿ ಟಾರ್ಚ್ ಬೆಳಕಿನಲ್ಲಿ ನೋಡಿದಾಗ ಕಾಡುಹಂದಿಯನ್ನು ಮರದ ಮೇಲೆತ್ತಿಕೊಂಡು ಹೋದ ಚಿರತೆ ಭಕ್ಷಣೆ ಮಾಡುತ್ತಿದ್ದುದು ಕಂಡು ಬಂದಿದೆ. ಆಗ ಜನರ ಗದ್ದಲದಿಂದ ಬೆದರಿದ ಚಿರತೆಯು ಮರದಿಂದ ಕೆಳಗೆ ಜಿಗಿದು ಕತ್ತಲಲ್ಲಿ ಕಣ್ಮರೆಯಾಗಿದೆ.
ಇದರಿಂದ ಜಮೀನಿನಲ್ಲಿ ನೆಲೆಸಿರುವ ರೈತರು ಮನೆಗಳಿಂದ ಹೊರಗೆ ಬರಲು ಸಾಧ್ಯವಾಗದೆ ಮುಂಜಾನೆ ಸಾರ್ವಜನಿಕರ ನೆರವಿನಿಂದ ಪರಿಶೀಲಿಸಿದಾಗ ಸ್ಥಳದಲ್ಲಿ ಚಿರತೆಯ ಹೆಜ್ಜೆಯ ಗುರುತುಗಳು ಕಂಡುಬಂದಿವೆ.
ಸಾರ್ವಜನಿಕರಲ್ಲಿಆತಂಕ:
ಜಮೀನಿನ ಮನೆಯ ಸಮೀಪವೇ ಚಿರತೆಯು ಬೇಟೆಯನ್ನುತಿನ್ನುತ್ತಿದ್ದ ಘಟನೆಯಿಂದ ಗ್ರಾಮಸ್ಥರು ಹಾಗೂ ರೈತರಲ್ಲಿಆತಂಕ ಹೆಚ್ಚುಮಾಡಿದೆ. ಅರಣ್ಯಇಲಾಖೆಯವರು ಕೂಡಲೇ ಚಿರತೆಯ ಬಂಧನಕ್ಕೆಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯ ನಾಗಭೂಷಣ ಒತ್ತಾಯಿಸಿದ್ದಾರೆ.







